

ಚಿಕ್ಕಮಗಳೂರು: ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕು ಹೆಚ್ಚಾಗಿ ಕಂಡುಬರುತ್ತಿದ್ದು, ಭಯದ ಕಾರಣಕ್ಕೆ ಜನರು ತಪಾಸಣೆಗೆ ಹಿಂದೇಟು ಹಾಕುತ್ತಿರುವುದರಿಂದ ವೈದ್ಯರ ತಂಡ ಗ್ರಾಮೀಣ ಭಾಗದ ಮನೆಗಳಿಗೆ ತೆರಳಿ ತಪಾಸಣೆ ನಡೆಸಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ತಿಳಿಸಿದರು. ತಾಲೂಕಿನ ಅಲ್ಲಂಪುರ ಗ್ರಾಪಂನಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕರೊನಾ ನಿಯಂತ್ರಣಕ್ಕಾಗಿ ಮಂಗಳವಾರ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಥಳದಲ್ಲೇ ಔಷಧೋಪಚಾರ:
ಸೋಂಕಿನ ಲಕ್ಷಣ ಕಂಡುಬಂದಲ್ಲಿ ವೈದ್ಯರ ತಂಡ ಸ್ಥಳದಲ್ಲಿಯೇ ಪರೀಕ್ಷೆ ನಡೆಸಿ ಸೂಕ್ತ ಔಷಧೋಪಚಾರ ಮಾಡಲಿದೆ. ಸೋಂಕಿತರ ಜತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೊಳಪಡಿಸಿ ಹೋಮ್ ಕ್ವಾರಂಟೈನ್ ಅಥವಾ ಕರೊನಾ ಆರೈಕೆ ಕೇಂದ್ರಗಳಲ್ಲಿ ಇರಲು ಸಲಹೆ ನೀಡಲಿದೆ. ಇದರಿಂದ ಜನರಲ್ಲಿ ಸೋಂಕಿನ ಭಯ ನೀಗಿ ಅರಿವು ಹೆಚ್ಚಾಗಲಿದೆ ಎಂದರು. ಕರೊನಾ ಸೋಂಕಿನ ಲಕ್ಷಣ ಇದ್ದಲ್ಲಿ ಕೂಡಲೇ ತಪಾಸಣೆ ಮಾಡಿಸಿಕೊಳ್ಳಬೇಕು. ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಇರಬೇಕು. ಇಲ್ಲದಿದ್ದಲ್ಲಿ ತಾಲೂಕು ಅಥವಾ ಜಿಲ್ಲಾಡಳಿತ ನಿಗದಿಪಡಿಸಿದ ಕರೊನಾ ಆರೈಕೆ ಕೇಂದ್ರಗಳಲ್ಲಿರಬೇಕು. ಗ್ರಾಮೀಣ ಭಾಗದಲ್ಲಿ ಕೊರೊನಾವನ್ನು ನಿಯಂತ್ರಿಸಲು ಹಾಗೂ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಜನತೆಯ ಸಹಕಾರ ಅಗತ್ಯ ಎಂದು ತಿಳಿಸಿದರು.
ಕರೊನಾ ಭಯ ನೀಗಿಸಲು ಕ್ರಮ:
ಕೈಮರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರತ್ಯಕ್ಷ ಭೈರವ್ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಜನರಲ್ಲಿ ಕರೊನಾ ಬಗ್ಗೆ ಭಯ ಹೋಗಲಾಡಿಸಿ ಅರಿವು ಮೂಡಿಸುವ ಮೂಲಕ ಲಸಿಕೆ ಪಡೆದುಕೊಳ್ಳುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ ಎಂದರು. ಅಲ್ಲಂಪುರ ಗ್ರಾಪಂ ಅಧ್ಯಕ್ಷ ದಾನೇಶ್ ಮಾತನಾಡಿ, ಹಳ್ಳಿಗಳಲ್ಲಿ ಬಹುತೇಕ ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿಲ್ಲ. ಹಾಗಾಗಿ ಸೋಂಕು ಹೆಚ್ಚಾಗಿದೆ ಎಂದು ಹೇಳಿದರು. ಗ್ರಾಪಂ ಸದಸ್ಯರಾದ ಪದ್ಮಾಕ್ಷಿ, ಜಯಂತಿ, ಕಮಲಾ, ಕಾಫಿ ಬೆಳೆಗಾರ ಎಚ್.ಟಿ.ಚಂದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಬಿ.ಜಯಣ್ಣ, ಆರೋಗ್ಯ ಸುರಕ್ಷಾಧಿಕಾರಿ ರುಕಿಯಾ, ಎನ್.ಜಯಣ್ಣ, ಇಂದಿರಮ್ಮ, ಮೇಲ್ವಿಚಾರಕಿ ಕಲಾಧರೆ ಮತ್ತಿತರರಿದ್ದರು.