

ಭಾಲ್ಕಿ: ಗ್ರಾಮ ಪಂಚಾಯಿತಿಗಳ ನೂತನ ಸದಸ್ಯರು ತಮ್ಮ ಹಳ್ಳಿಗಳ ಅಬಿವೃದ್ಧಿಗೆ ಶ್ರಮಿಸಬೇಕು. ಮಾದರಿ ಗ್ರಾಮ ಮಾಡುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡು ಕೆಲಸ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಕರೆ ನೀಡಿದರು.
ತಾಲೂಕಿನ ತೂಗಾಂವ್ (ಕಟ್ಟಿ) ಗ್ರಾಮದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತಾಲೂಕಿನ 40 ಗ್ರಾಪಂಗಳಲ್ಲಿ ಬಹುತೇಕ ಕಡೆ ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ. ಜನರು ಇಟ್ಟ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಭಾಲ್ಕಿಯ ಪ್ರಾಥಮಿಕ ಸಹಕಾರ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾಡ್೯) ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ ಮಾತನಾಡಿ, ಪಂಚಾಯಿತಿಗೆ ಬರುವ ಅನುದಾನವನ್ನು ಸದುಪಯೋಗ ಪಡಿಸಿಕೊಂಡು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಹೇಳಿದರು.
ಗ್ರಾಪಂ ಸದಸ್ಯರಾದ ರಾಜಕುಮಾರ ಮಂಗಲಗಿ, ಸುಧಾರಾಣಿ ವಿಶ್ವನಾಥ, ವೀರಶೆಟ್ಟಿ ಹಿಪ್ಪರ್ಗಿ, ಛಾಯಾ ಶಾಂತಕುಮಾರ, ಸಂಗೀತ ಅರುಣಕುಮಾರ ಕಲ್ಲೂರೆ ಇತರರಿದ್ದರು.