ಹಳ್ಳಕ್ಕೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್

27 HANUR 3
ಹನೂರು ತಾಲೂಕಿನ ತಾಳುಬೆಟ್ಟದ ಬಳಿ ಸಾರಿಗೆ ಬಸ್ ಹಳ್ಳಕ್ಕೆ ನುಗ್ಗಿರುವುದು.
Published on


ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆ29 ಜನರಿಗೆ ಗಾಯ


ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ತಾಳುಬೆಟ್ಟದ ಬಳಿ ಬುಧವಾರ ಚಾಲಕ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಹಳ್ಳಕ್ಕೆ ನುಗ್ಗಿದ ಪರಿಣಾಮ ಚಾಲಕ, ನಿರ್ವಾಹಕ ಸೇರಿದಂತೆ 29 ಜನರು ಗಾಯಗೊಂಡಿದ್ದಾರೆ.

ಚಾಲಕ ಚಂದ್ರಶೇಖರ್, ನಿರ್ವಾಹಕ ಪ್ರಕಾಶ್, ಕಾವೇರಿಪುರದ ನಂಜಮ್ಮ (47), ಹೊನ್ನೂರಿನ ರಾಮಚಂದ್ರ (32), ನಾಗರಾಜು, ಶಾಂತನಾಯಕ, ನಂದಿನಿ, ಕುಮಾರ್, ಗೌರಮ್ಮ ವರಲಕ್ಷ್ಮೀ, ನಾಗಮ್ಮ, ನಂದಿನಿ, ಜೀವನ್, ಶಿವಣ್ಣ, ಶ್ರೇಯಾ, ಜೀವಿತ್, ನಿಂಗಪ್ಪ, ರಂಜಿತ, ಮಾದೇವನಾಯ್ಕ, ಅಶ್ವಿನಿ, ಅಮೂಲ್ಯ, ಶಿವಣ್ಣ, ಭಾಗ್ಯ, ಶೇಷನಾಯ್ಕ, ಬೋರಯ್ಯ, ಗೌರಮ್ಮ, ಮುತ್ತು ಎಂಬುವರು ಗಾಯಗೊಂಡವರು. ಗಾಯಾಳುಗಳು ಮೈಸೂರು ಹಾಗೂ ಚಾ.ನಗರದ ಜಿಲ್ಲೆಯವರೆಂದು ತಿಳಿದು ಬಂದಿದೆ.

ಘಟನೆ ವಿವರ: ಬುಧವಾರ ಬೆಳಗ್ಗೆ 8.30ರ ವೇಳೆಯಲ್ಲಿ ಮಲೆಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆಗೆ ಸಾರಿಗೆ ಬಸ್‌ನಲ್ಲಿ 52 ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ತಾಳುಬೆಟ್ಟದ ಬಳಿ ಚಾಲಕ ನಿಯಂತ್ರಣ ತಪ್ಪಿದ್ದರಿಂದ ಬಸ್ ತಡೆಗೋಡೆಯನ್ನು ಜಿಗಿದು ಹಳ್ಳದಲ್ಲಿನ ಮರವೊಂದಕ್ಕೆ ಡಿಕ್ಕಿ ಹೊಡೆದು ನಿಂತಿತು. ಪರಿಣಾಮ ಚಾಲಕ, ನಿರ್ವಾಹಕ ಸೇರಿದಂತೆ 29 ಜನರು ಗಾಯಗೊಂಡರು.

ಈ ವೇಳೆ ಗಾಯಾಳುಗಳನ್ನು ರಕ್ಷಿಸಿದ ಸಾರ್ವಜನಿಕರು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಸಣ್ಣ ಪುಟ್ಟ ಗಾಯಗೊಂಡಿದ್ದವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿದ್ದು, ತೀವ್ರವಾಗಿ ಗಾಯಗೊಂಡ ಚಾಲಕ ಚಂದ್ರಶೇಖರ್, ನಿರ್ವಾಹಕ ಪ್ರಕಾಶ್, ನಂಜಮ್ಮ ಹಾಗೂ ರಾಮಚಂದ್ರ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಯಿತು. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ಸನ್ನು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net