

ಜಿ.ನಾಗರಾಜ್ ಬೂದಿಕೋಟೆ
ಗ್ರಾಮಗಳನ್ನು ಸ್ವಚ್ಛ ಹಾಗೂ ಸುಂದರಗೊಳಿಸಲು ಸರ್ಕಾರ ಲಾಂತರ ರೂ. ವ್ಯಯಿಸಿ ನಿರ್ಮಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹಳ್ಳ ಹಿಡಿಯುವ ಆತಂಕ ಶುರುವಾಗಿದೆ.
ಸ್ವಚ್ಛ ಭಾರತ್ ಮಿಷನ್ ಮೂಲಕ ಗ್ರಾಪಂ ಮಟ್ಟದಲ್ಲಿ ಸ್ವಚ್ಛತೆ ಕಾಪಾಡಲು ಬಂಗಾರಪೇಟೆ ತಾಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಸಂಕೀರ್ಣ(ಘನ ತ್ಯಾಜ್ಯ ವಿಲೇವಾರು ಘಟಕ)ಗಳನ್ನು ಆರಂಭಿಸಲು ಸರ್ಕಾರ ಜಿಪಂ ಮೂಲಕ ಲಕ್ಷಾಂತರ ರೂ. ಅನುದಾನ ಖರ್ಚುಮಾಡಿ, ಯೋಜನೆ ಕಾರ್ಯಗತಗೊಳಿಸಿದೆ.
ಈ ಯೋಜನೆ ಮೂಲಕ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರತಿಯೊಂದು ಗ್ರಾಮದ ಮನೆಗಳಿಂದ ಸಂಗ್ರಹಿಸಿದ ಕಸವನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿದ ಘನ ತ್ಯಾಜ್ಯ ನಿರ್ವಹಣಾ ಘಟಕದ ಮೂಲಕ ಪ್ಲಾಸ್ಟಿಕ್, ಕಬ್ಬಿಣ, ಗಾಜು ಸೇರಿ ಎಲ್ಲ ವಸ್ತುಗಳನ್ನು ವಿಂಗಡಣೆ ಮಾಡಿ, ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಸಂಗ್ರಹಿಸಿ ವಿಂಗಡಣೆ ಮಾಡಿದ ವಸ್ತುಗಳನ್ನು ಮಾರಾಟ ಮಾಡಿ ಅದದಿಂದ ಬರುವ ಹಣವನ್ನು ಟಕದ ನಿರ್ವಹಣೆಗೆ ಬಳಸಲು ಅನುಕೂಲ ಕಲ್ಪಿಸಲಾಗಿದೆ. ಆದರೆ ಯೋಜನೆ ಆರಂಭವಾಗಿ ವರ್ಷಗಳೇ ಕಳೆದರೂ ಇನ್ನೂ ಹಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ತೆರೆದಿಲ್ಲ. 10ಕ್ಕೂ ಹೆಚ್ಚಿನ ಪಂಚಾಯಿತಿಗಳಲ್ಲಿ ಘಟಕ ತೆರೆದಿದೆಯಾದರೂ ಸರಿಯಾದ ರೀತಿಯಲ್ಲಿ ಕಸ ಸಂಗ್ರಹಣೆ ಮಾಡಿ ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ತೆರಿಗೆ ಹಣ ಗುಳುಂ ?: ಗ್ರಾಮಗಳಿಗೆ ಕಸ ಸಂಗ್ರಹಣಾ ವಾಹನ ಹೋಗದ ಕಾರಣ ಜನರು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಾ ಗ್ರಾಮವನ್ನು ಗಬ್ಬು ನಾರುವಂತೆ ಮಾಡಿದ್ದಾರೆ. ಎಲ್ಲಿ ನೋಡಿದರೂ ಕಸದ ರಾಶಿ ಮತ್ತು ಪ್ಲಾಸ್ಟಿಕ್ ಕವರ್ಗಳು ರಾರಾಜಿಸುತ್ತಿವೆ. ಕೆಲ ಗ್ರಾಮಗಳಲ್ಲಿಯಂತೂ ಕಸದ ಸಮಸ್ಯೆ ಉಲ್ಪಣಗೊಂಡು ಸಾಂಕ್ರಾಮಿಕ ಭೀತಿ ಎದುರಾಗಿದೆ. ಪರಿಸ್ಥಿತಿ ಹೀಗಿದ್ದರೂ ಕಸ ಸಂಗ್ರಹಿಸಿದಂತೆ ಲೆಕ್ಕವನ್ನು ಪಕ್ಕಾ ಮಾಡಲಾಗಿದೆ. ಜತೆಗೆ ತಿಂಗಳಿಗೆ 20ರಿಂದ 30 ಸಾವಿರ ರೂ. ಖರ್ಚು ತೋರಿಸುವ ಮೂಲಕ ಜನರ ತೆರಿಗೆ ಹಣ ಗುಳುಂ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕೆಲ ಘಟಕಗಳಿಗೆ ಬೀಗ: ಲಕ್ಷಾಂತರ ರೂ.ಖರ್ಚು ಮಾಡಿ ಘನ ತ್ಯಾಜ್ಯ ವಿಲೇವಾರು ಘಟಕ ನಿಮಾರ್ಣ ಮಾಡಿದ್ದರೂ ಬಹುತೇಕ ಘಟಕಗಳಿಗೆ ಬೀಗ ಜಡಿಯಲಾಗಿದೆ. ಸರ್ಕಾರದ ಸುತ್ತೋಲೆಯಂತೆ ಯಾವ ಘಟಕಗಳೂ ನಿರ್ವಹಣೆಯಾಗದೆ ಮೂಲೆ ಗುಂಪು ಮಾಡಲಾಗಿದೆ. ಬೂದಿಕೋಟೆ, ಚಿನ್ನಗೋಟೆ, ಯಳೇಸಂದ್ರ ಸೇರಿ ಇತರ ಪಂಚಾಯಿತಿಗಳಲ್ಲಿ ಹಲವು ಕಾರಣಗಳಿಂದ ಘಟಕಗಳನ್ನು ಇನ್ನೂ ನಿರ್ಮಿಸದ ಕಾರಣ ಕಸ ಸಂಗ್ರಹಣೆ ಮತ್ತು ನಿರ್ವಹಣೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.
ಗ್ರಾಪಂ ಕೇಂದ್ರದಲ್ಲಷ್ಟೇ ವಾಹನ ಸಂಚಾರ:ಪಂಚಾಯಿತಿ ವಾಹನ ನಿತ್ಯ ಸಂಚರಿಸುತ್ತಿದೆಯಾದರೂ ಅದು ಕೇವಲ ಪಂಚಾಯಿತಿ ಕೇಂದ್ರದ ಗ್ರಾಮಕ್ಕೆ ಸೀಮಿತ ಎಂಬಂತಿದ್ದು, ಉಳಿದ ಗ್ರಾಮಗಳಿಗೆ ಸಂಚರಿಸುತ್ತಿಲ್ಲ. ಮನೆಗಳಿಂದ ಸಂಗ್ರಹಿಸಿದ ಕಸವನ್ನು ಸಹ ಸಿಬ್ಬಂದಿ ಘಟಕಕ್ಕೆ ತಲುಪಿಸುತ್ತಿಲ್ಲ. ಬದಲಾಗಿ ಗ್ರಾಮದ ಹೊರ ವಲಯಲ್ಲಿ ಸುರಿದು ಬೆಂಕಿ ಇಡಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಗ್ರಾಪಂಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನಲ್ಲಿ 10ಕ್ಕೂ ಹೆಚ್ಚಿನ ಗ್ರಾಪಂಗಳಲ್ಲಿ ಘನ ತ್ಯಾಜ್ಯ ವಿಲೇವಾರು ಘಟಕ ತೆರೆದಿದ್ದರೂ ಅವುಗಳು ಬಳಕೆಯಾಗುತ್ತಿಲ್ಲ. ಘಟಕಗಳಿಗೆ ಬೀಗ ಜಡಿದಿರುವ ಕಾರಣ ಸಿಬ್ಬಂದಿ ಕಾಟಾಚಾರಕ್ಕೆ ಒಂದೆರಡು ಗ್ರಾಮಗಳಲ್ಲಿ ಕಸ ಸಂಗ್ರಹಿಸಿ ವಾಹನ ನಿಲ್ಲಿಸುತ್ತಿದ್ದಾರೆ. ಅತ್ತ ಕಸ ಸಂಗ್ರಹಣೆ ಸಮರ್ಪಕವಾಗಿ ಆಗಿದೆ ಎಂದು ಅಧಿಕಾರಿಗಳು ಸಾವಿರಾರು ರೂ. ಬಿಲ್ ಮಾಡುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಸ್ವಚ್ಛತೆಯ ವಿಚಾರವಾಗಿ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ.
| ಹುಣಸನಹಳ್ಳಿ ವೆಂಕಟೇಶ್, ಅಧ್ಯಕ್ಷ ಕರ್ನಾಟಕ ದಲಿತ ರೈತ ಸೇನೆ
ಬಹುತೇಕ ಗ್ರಾಪಂಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ತೆರೆಯಲಾಗಿದ್ದು, ಒಂದೆರಡು ಕಡೆ ಘಟಕ ನಿಮಾರ್ಣ ಕಾರ್ಯ ನಡೆಯಬೇಕಿದೆ. ಕಸ ಸಂಗ್ರಹಣೆ ಸಮರ್ಪಕ ರೀತಿಯಲ್ಲಿ ನಡೆಯುತ್ತಿದ್ದು, ಸಮಸ್ಯೆ ಇರುವ ಕಡೆ ಬಗೆ ಹರಿಸಲಾಗುವುದು. ಕಸ ಸಂಗ್ರಹಣೆಗೆ ಸಂಬಂಧಿಸಿದಂತೆ ಹಣ ಪೋಲಾಗುತ್ತಿದ್ದರೆ ಕ್ರಮ ಜರುಗಿಸಲಾಗುವುದು.
| ರವಿಕುಮಾರ್ ಇಒ ತಾಪಂ
ತ್ಯಾಜ್ಯ ವಿಲೇವಾರಿ ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಜತೆಗೆ ಸಿಬ್ಬಂದಿ ಗ್ರಾಮಗಳಿಂದ ಕಸವನ್ನು ಸಂಗ್ರಹಣೆ ಮಾಡದ ಪರಿಣಾಮ ಹಾಗೂ ಜನರಿಗೆ ಅರಿವು ಇಲ್ಲದ ಕಾರಣ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಜರುಗಿಸಬೇಕು.
| ಎಂ.ಮನೋಜ್, ಗ್ರಾಪಂ ಸದಸ್ಯ ಐನೋರಹೊಸಹಳ್ಳಿ