ಹಳೇಬೀಡು -ಹಗರೆ-ಹಾಸನ ಹೆದ್ದಾರಿ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ರಸ್ತೆತಡೆದು ಪ್ರತಿಭಟನೆ.

ಹಳೇಬೀಡು -ಹಗರೆ-ಹಾಸನ ಹೆದ್ದಾರಿ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ರಸ್ತೆತಡೆದು ಪ್ರತಿಭಟನೆ.
Published on

ಹಳೇಬೀಡು: ಸಂಪೂರ್ಣ ಹದಗೆಟ್ಟಿರುವ ಹಳೇಬೀಡು -ಹಗರೆ-ಹಾಸನ ಹೆದ್ದಾರಿಯನ್ನು ತಕ್ಷಣ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಸುತ್ತಲಿನ ನೂರಾರು ಗ್ರಾಮಸ್ಥರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.


ಸೋಮವಾರ ಹೋಬಳಿಯ ಸಿದ್ದಾಪುರ ಗ್ರಾಮದ ತಿರುವು ರಸ್ತೆಯಲ್ಲಿ ಜಮಾಯಿಸಿದ್ದ ನೂರಾರು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಆಡಳಿತ ಹಾಗೂ ಶಾಸಕರ ನಿರ್ಲಕ್ಷ್ಯ ಧೋರೆಣೆಯೇ ಹೆದ್ದಾರಿ ಹದಗೆಡಲು ಕಾರಣ ಎಂದು ಆರೋಪಿಸಿ ರಸ್ತೆ ಸಂಚಾರ ತಡೆದು ಧರಣಿ ಕುಳಿತರು. ಪ್ರತಿನಿತ್ಯ ಜನಪ್ರತಿನಿಧಿಗಳು ಇದೇ ರಸ್ತೆಯನ್ನು ಸಂಚಾರಕ್ಕೆ ಬಳಸುತ್ತಾರೆ. ವಿಶ್ವವಿಖ್ಯಾತ ದೇಗುಲಗಳನ್ನು ಸಂದರ್ಶಿಸಲು ಸಾವಿರಾರು ಪ್ರವಾಸಿಗರು ಬಂದು ಹೊಗುತ್ತಾರೆ. ಪ್ರಸಿದ್ಧ ಕ್ಷೇತ್ರ ಪುಷ್ಪಗಿರಿಗೆ ಈ ಹೆದ್ದಾರಿಯು ಮುಖ್ಯ ಸಂಪರ್ಕ ಕೊಂಡಿಯಾಗಿದೆ. ಇದೆಲ್ಲದರ ಅರಿವಿದ್ದೂ ರಸ್ತೆ ದುರಸ್ತಿಗೆ ಮುಂದಾಗದ ಸರ್ಕಾರ ಹಾಗೂ ಸ್ಥಳೀಯಾಡಳಿತವು ಜನರನ್ನು ಧೂಳಿನ ಕೂಪಕ್ಕೆ ತಳ್ಳಿದೆ. ವಾಹನಗಳ ಹೊಗೆ ಹಾಗೂ ರಸ್ತೆಯ ಧೂಳಿನಿಂದ ಸುತ್ತಲಿನ ಗ್ರಾಮಸ್ಥರು ಉಸಿರಾಟ ಸಂಬಂಧಿತ ರೋಗಗಳಿಂದ ಬಳಲುತ್ತಿದ್ದಾರೆ. ಕೂಡಲೆ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು, ಅಲ್ಲಿಯವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದರು.


ಪ್ರತಿಭಟನೆ ಕಾವು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ಲೋಕೊಪಯೋಗಿ ಅಧಿಕಾರಿಗಳೊಂದಿಗೆ ಆಗಮಿಸಿದ ಶಾಸಕ ಕೆ.ಎಸ್.ಲಿಂಗೇಶ್, ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ವರ್ಷದ ಹಿಂದೆಯೇ ಹಳೇಬಿಡಿನ ಕರಿಯಮ್ಮ ಮಹಾ ದ್ವಾರದಿಂದ ಹಗರೆ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದ ರಸ್ತೆ ನಿರ್ಮಿಸಲು ಅಂದಾಜು10 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೆ. ಇಲ್ಲಿಯವರೆಗೆ ನನಗೆ ಸಕಾರಾತ್ಮಕ ಸ್ಪಂದನೆ ದೊರಕಿರಲಿಲ್ಲ. ಆದರೂ ಪಟ್ಟುಬಿಡದೆ ಹರುಬಿಗಳ್ಳಿ ಗಡಿಯ ವರೆಗಿನ ರಸ್ತೆ ನಿರ್ಮಾಣಕ್ಕೆ ತಗುಲುವ 4 ಕೋಟಿ 90 ಲಕ್ಷ ರೂ. ಅನುದಾನವನ್ನು ತಿಂಗಳೊಳಗೆ ಬಿಡುಗಡೆ ಮಾಡಿಸಿಕೊಂಡು ಎರಡು ತಿಂಗಳಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದು ಹೇಳಿ ಪ್ರತಿಭಟನೆಯನ್ನು ನಿಲ್ಲಿಸುವಂತೆ ಮನವಿ ಮಾಡಿದರು.


ಶಾಸಕರ ಭರವಸೆಗೆ ಸ್ಪಂದಿಸಿದ ಪ್ರತಿಭಟನಾಕಾರರು ಕಾಲಮಿತಿಯೊಳಗೆ ಕಾಮಗಾರಿ ಮುಗಿಸುವಂತೆ ಷರತ್ತು ವಿಧಿಸಿ ಧರಣಿಯನ್ನು ಕೈಬಿಟ್ಟರು. ಪ್ರತಿಭಟನೆಯಿಂದಾಗಿ ಕೆಲಕಾಲಬಸಾರಿಗೆ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು.ಸಿದ್ದಾಪುರ ಗ್ರಾಮದ ಮುಖ್ಯರಸ್ತೆಯಿಂದ ಪುಷ್ಪಗಿರಿ ಬೆಟ್ಟದ ತಪ್ಪಲಿನವರೆಗೂ ಪ್ರವಾಸಿ ವಾಹನಗಳು ಸಾಲಾಗಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಶಾಸಕರ ಭರವಸೆ ಹಾಗೂ ಪೊಲೀಸರ ಮನವೊಲಿಕೆಯಿಂದ ಪ್ರತಿಭಟನೆ ಕೊನೆಗೊಂಡು ಸಂಚಾರ ಎಂದಿನಂತೆ ಮುಂದುವರಿಯಿತು.
ಪ್ರತಿಭಟನೆಯಲ್ಲಿ ಸಿದ್ದಾಪುರ, ಭಂಡಾರಿಕಟ್ಟೆ, ಹುಲಿಕೆರೆ, ಬಸ್ತಿಹಳ್ಳಿ ಹಾಗೂ ಹಳೇಬೀಡು ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net