ಹಳೇಬೀಡಿನಲ್ಲಿ ಹನುಮ ಜಯಂತಿ ಸಂಭ್ರಮ

07hbd2
Published on

ಹಳೇಬೀಡು: ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಶನಿವಾರ ಪಟ್ಟಣದಲ್ಲಿ ಹನುಮ ಜಯಂತಿ ಉತ್ಸವ ವಿಜೃಂಭಣೆಯಿಂದ ಜರುಗಿತು.

ಹನುಮ ಜಯಂತಿ ಪ್ರಯುಕ್ತ ಹಳೇಬೀಡಿನ ಕೋಟೆ ಆಂಜನೇಯ, ಬೆಣ್ಣೆಗುಡ್ಡದ ವೀರಾಂಜನೇಯ ಹಾಗೂ ಹುಲಿಕೆರೆಯ ಹನುಮಂತ ದೇಗುಲಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ಕೋಟೆ ಆಂಜನೇಯ ದೇಗುಲದಲ್ಲಿ ಪ್ರಾತಃಕಾಲದಿಂದಲೇ ಮೂಲ ದೇವರಿಗೆ ವಿಪ್ರರ ವೇದಘೋಷದೊಂದಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ವಿಶೇಷ ಅಲಂಕಾರ ಮಾಡಲಾಯಿತು. ಬಳಿಕ ಮಹಾನೈವೇದ್ಯ ಹಾಗೂ ಮಹಾಮಂಗಳಾರತಿ ಕಾರ್ಯಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು. ಬೆಣ್ಣೆಗುಡ್ಡದ ವೀರಾಂಜನೇಯ ದೇವರಿಗೆ ಅಭಿಷೇಕದ ಬಳಿಕ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಎರಡೂ ಕಡೆ ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ತೀರ್ಥ-ಪ್ರಸಾದ ಸ್ವೀಕರಿಸಿದರು.

ಹುಲಿಕೆರೆ ಗ್ರಾಮದ ಹನುಮಂತ ದೇಗುಲದಿಂದ ಆಂಜನೇಯ ದೇವರ ಉತ್ಸವಮೂರ್ತಿಯನ್ನು ಪುಷ್ಪಾಲಂಕೃತ ರಥದಲ್ಲಿ ಹಳೇಬೀಡಿನ ಕೋಟೆ ಆಂಜನೇಯ ದೇವಾಲಯಕ್ಕೆ ಕರೆತರಲಾಯಿತು. ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಆಗಮಿಸಿ ರಥಕ್ಕೆ ಪುಷ್ಪಾರ್ಚನೆ ನೆರವೇರಿಸಿದ ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಹೂವುಗಳಿಂದ ಸಿಂಗರಿಸಲಾಗಿದ್ದ ಬೆಳ್ಳಿ ರಥದಲ್ಲಿ ಹನುಮ ಉತ್ಸವ ಮೂರ್ತಿಯನ್ನು ಸ್ಥಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಜೈ ಬಜರಂಗ ಬಲಿ ಎಂಬ ಘೋಷಣೆ ಕೂಗುತ್ತಾ ಉತ್ಸವದ ಕಳೆ ಹೆಚ್ಚಿಸಿದರು. ಅರ್ಚಕ ಕೃಷ್ಣ ಕೋಟೆ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯ ನಡೆಸಿಕೊಟ್ಟರು. ಎಚ್.ಎನ್.ನರಸಿಂಹ ಪ್ರಸಾದ್, ಎಚ್.ಜಿ. ಮಂಜುನಾಥ್, ಎಚ್.ಎ.ರಘುನಾಥ್, ನಾಗರಾಜ್ ಮತ್ತಿತರರಿದ್ದರು.

ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಭಕ್ತರು: ಹನುಮ ಜಯಂತಿ ನಿಮಿತ್ತ ನಡೆದ ಉತ್ಸವದಲ್ಲಿ ಡಿಜೆ ಶಬ್ದಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ನೂರಾರು ಸಂಖ್ಯೆಯಲ್ಲಿದ್ದ ವಿಹಿಂಪ ಹಾಗೂ ಬಜರಂಗದಳದ ಕಾರ್ಯಕರ್ತರು ಡಿಜೆಯಿಂದ ಹೊರ ಹೊಮ್ಮುತ್ತಿದ್ದ ಹಾಡುಗಳಿಗೆ ದಣಿವರಿಯದೆ ಕುಣಿದು ಸಂಭ್ರಮಿಸಿದರು. ಕರಿಯಮ್ಮ ದೇಗುಲ ವೃತ್ತದಿಂದ ಹೊರಟ ಉತ್ಸವ ಮೂರು ಗಂಟೆಗೂ ಅಧಿಕ ಕಾಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಣ್ಣೆಗುಡ್ಡ ಆಂಜನೇಯ ದೇಗುಲದ ತಪ್ಪಲಿನಲ್ಲಿ ಸಂಪನ್ನವಾಯಿತು. ಮೆರವಣಿಗೆ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಸಾವಿರಾರು ಜನರಿಗೆ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಹಳೇಬೀಡು ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಉದ್ಯಮಿ ಗ್ರಾನೈಟ್ ರಾಜಶೇಖರ್, ಮುಖಂಡ ಎಚ್.ಅಶೋಕ್, ಎಚ್.ಎಂ.ಗೋವಿಂದಪ್ಪ, ಮಲ್ಲೇಶಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net