

ಹಳೇಬೀಡು: ಲೋಕಕಲ್ಯಾಣಾರ್ಥವಾಗಿ ಭಾನುವಾರ ಮತ್ತು ಸೋಮವಾರ ಹಳೇಬೀಡಿನ ಖಾಸಗಿ ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಿದ್ದ ಮಹಾ ರುದ್ರಯಾಗ ಮತ್ತು ಗಿರಿಜಾ ಕಲ್ಯಾಣ ಮಹೋತ್ಸವ ವಿವಿಧ ಮಠಾಧೀಶರು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಸಂಪನ್ನಗೊಂಡಿತು.
ಹಳೇಬೀಡು ಹಾಗೂ ಸುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ 50ಕ್ಕೂ ಹೆಚ್ಚು ಪುರೋಹಿತರ ತಂಡ ಬೇಲೂರು ತಾಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ಶಾಂತಿ ಸುಭಿಕ್ಷೆಯ ಸಂಕಲ್ಪದೊಂದಿಗೆ ಎರಡು ದಿನಗಳ ಕಾಲ ನಡೆಸಿದ ಗಿರಿಜಾ ಕಲ್ಯಾಣೋತ್ಸವ ಮತ್ತು ಮಹಾ ರುದ್ರಯಾಗ ಸೋಮವಾರ ಮಧ್ಯಾಹ್ನ ಪೂರ್ಣಾಹುತಿಯೊಂದಿಗೆ ಸಮಾಪ್ತಿಯಾಯಿತು.
ಪೂಜಾ ಕಾರ್ಯದ ನೇತೃತ್ವವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್ ಮತ್ತು ಪತ್ನಿ ಕೋಮಲಾ ಸುರೇಶ್ ವಹಿಸಿದ್ದರು. ನಾಡಿನ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಮಠಾಧೀಶರು ಮತ್ತು ಭಕ್ತರು ಯಾಗದಲ್ಲಿ ಪಾಲ್ಗೊಂಡು ಭಕ್ತಿ-ಭಾವ ಪ್ರದರ್ಶಿಸಿದರು.
ಕಾರ್ಯಕ್ರಮದ ಪ್ರಯುಕ್ತ ಭಾನುವಾರ ಬೆಳಗ್ಗೆ ಐತಿಹಾಸಿಕ ದ್ವಾರಸಮುದ್ರ ಕೆರೆಯ ದಡದಲ್ಲಿ 108 ಕಳಸಗಳಲ್ಲಿ ನೀರನ್ನು ಸಂಗ್ರಹಿಸಿ ಗಂಗಾಮಾತೆಯನ್ನು ಆವಾಹನೆ ಬಳಿಕ ಧಾರ್ಮಿಕ ವಿಧಿಗಳ ಅನುಸಾರ ಪೂಜೆ ಸಲ್ಲಿಸಿ ಯಾಗಶಾಲೆವರೆಗೂ ಕಲಾ ತಂಡಗಳ ಜತೆಗೆ ಮೆರವಣಿಗೆಯಲ್ಲಿ ಸುಮಂಗಲಿಯರು ಹೊತ್ತು ತಂದಿದ್ದರು.
ಭಾನುವಾರ ಸಾಯಂಕಾಲ ಯಾಗ ಶಾಲಾ ಪ್ರವೇಶದ ಬಳಿಕ ಅಂಕುರಾರ್ಪಣ ಮುಂತಾದ ಪೂಜೆಗಳನ್ನು ಮಾಡಲಾಯಿತು. ಬಳಿಕ ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಅರಿಶಿಣ ಕುಟ್ಟುವ ಶಾಸ್ತ್ರ, ವರಪೂಜೆ, ನಿಶ್ಚಿತಾರ್ಥ ಮುಂತಾದವುಗಳನ್ನು ತಡರಾತ್ರಿವರೆಗೂ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಗಿರಿಜಾ ವಿವಾಹಕ್ಕಾಗಿ ನಿರ್ಮಿಸಿದ್ದ ಕಲ್ಯಾಣ ಮಂಟಪದಲ್ಲಿ ಕಾಶಿ ಯಾತ್ರೆಯ ಸಂಕಲ್ಪ ನಡೆಸಿ ಕನ್ಯಾದಾನ, ಮಾಂಗಲ್ಯ ಧಾರಣೆ ವಿಧಿಗಳನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಪೂಜಾ ಕಾರ್ಯಕ್ಕೆ ಆಗಮಿಸಿದ್ದ ಭಕ್ತರು ವಿವಾಹದ ಕ್ರಮಗಳನ್ನು ನೋಡಿ ಶ್ರದ್ಧಾಭಕ್ತಿಯಿಂದ ಭಾವ ಪರವಶರಾದರು. ಇದೇ ವೇಳೆ ಯಾಗ ಶಾಲೆಯಲ್ಲಿ ಪುರೋಹಿತರ ತಂಡ ಮಹಾರುದ್ರ ಪುರಶ್ಚರಣ ಕಾರ್ಯದಲ್ಲಿ ತೊಡಗಿದ್ದರು. ಜಪ ಮುಕ್ತಾಯವಾದ ಬಳಿಕ ಮಹಾ ರುದ್ರಯಾಗಕ್ಕೆ ಚಾಲನೆ ನೀಡಲಾಯಿತು. ಮಧ್ಯಾಹ್ನದವರೆಗೂ ಯಾಗ ಜರುಗಿ, ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಪೂರ್ಣಾಹುತಿಯನ್ನು ನಡೆಸಲಾಯಿತು. ಮಹಾ ಮಂಗಳಾರತಿಯ ಬಳಿಕ, ಕಾರ್ಯಕ್ರಮಕ್ಕೆ ಬಂದಿದ್ದ ಭಕ್ತರಿಗೆ ಅನ್ನದಾಸೋಹ ಜರುಗಿತು.
ಧಾರ್ಮಿಕ ಕಾರ್ಯಗಳಿಂದ ಪುಣ್ಯಪ್ರಾಪ್ತಿ
ಧಾರ್ಮಿಕ ಕಾರ್ಯಗಳನ್ನು ಶ್ರದ್ಧಾ-ಭಕ್ತಿಯಿಂದ ನಡೆಸುವವರಿಗೆ ಪುಣ್ಯ ಪ್ರಾಪ್ತಿಯಾಗುವುದಲ್ಲದೆ ಇಹ ಮತ್ತು ಪರಲೋಕದಲ್ಲಿ ಶಾಂತಿ, ನೆಮ್ಮದಿ ದೊರಕುತ್ತದೆ. ಹಾಗಾಗಿ, ಬದುಕಿರುವಾಗ ಜನೋಪಕಾರಿ ಕಾರ್ಯಗಳನ್ನು ನಡೆಸುವುದು ಉತ್ತಮವಾದ ದಾರಿ ಎಂದು ಪುಷ್ಪಗಿರಿ ಮಠದ ಶ್ರೀಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮಹಾರುದ್ರಯಾಗದ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಗುರು, ಹಿರಿಯರ ಮಾರ್ಗದರ್ಶನದಲ್ಲಿ ನಡೆಯುವವರಿಗೆ ಎಂದಿಗೂ ಯಶಸ್ಸು ಸಿಗುತ್ತದೆ. ಹಣ ಒಂದೇ ಜೀವನದಲ್ಲಿ ಎಲ್ಲವನ್ನು ನಿರ್ಧರಿಸುವುದಿಲ್ಲ, ಬದಲಾಗಿ ವ್ಯಕ್ತಿಯು ಶಾಂತಿ, ನೆಮ್ಮದಿಯಿಂದ ಕೂಡಿದ್ದಾನೆ ಎಂದರೆ ಆತನೇ ನಿಜವಾದ ಸುಖೀಪುರುಷ ಎನ್ನಬಹುದು. ಅಂಥ ಸುಖಕಾಗಿ ನಾವು ಧಾರ್ಮಿಕ ಕಾರ್ಯಗಳ ಮೊರೆ ಹೋಗಬೇಕಾಗುತ್ತದೆ ಎಂದು ತಿಳಿಸಿದರು.
ಹೋಮ-ಹವನದ ಜತೆಗೆ ಆಧ್ಯಾತ್ಮಿಕ ಅರಿವನ್ನು ರೂಢಿಸಿಕೊಂಡು ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ತತ್ವಕ್ಕೆ ಬದ್ಧರಾಗಿರಬೇಕು. ಕೆಲವರಿಗೆ ಬೇಕಾದಷ್ಟು ಹಣವಿರುತ್ತದೆ. ಆದರೆ, ದಾನ ಮಾಡುವ ಸೌಜನ್ಯವಿರುವುದಿಲ್ಲ. ಕೆಲವರಿಗೆ ದಾನ ಕೊಡುವ ಮನಸ್ಸಿರುತ್ತದೆ. ಆದರೆ, ಅವರ ಬಳಿ ಹಣವಿರುವುದಿಲ್ಲ. ಹಾಗಾಗಿ ಉಳ್ಳವರು ಶಿವಾಲಯ ಮಾಡುವರು ಎನ್ನುವಂತೆ ಅನುಕೂಲ ಇರುವವರು ದಾನ ಧರ್ಮಾದಿಗಳನ್ನು ನಡೆಸಿಕೊಂಡು ಹೋದರೆ ಪ್ರಪಂಚದಲ್ಲಿ ಶಾಂತಿ, ಸಮಾಧಾನಗಳು ನೆಲೆಸುತ್ತವೆ ಎಂದು ಅಭಿಪ್ರಾಯಪಟ್ಟರು.
ಜನರ ನೆಮ್ಮದಿಗಾಗಿ ರುದ್ರಯಾಗ: ಹಳೇಬೀಡು ಸುತ್ತಲಿನ ಗ್ರಾಮಸ್ಥರು ಮಹಾರುದ್ರಯಾಗ ನಡೆಸುವುದಾಗಿ ನನ್ನ ಬಳಿ ಬಂದು ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು. ಅವರ ಕೋರಿಕೆಗೆ ಮಣಿದು, ನಾನು ನನ್ನ ಪತ್ನಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ನಮ್ಮ ಕೈಲಾದ ಸೇವೆಯನ್ನು ಮಾಡಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್ ಹೇಳಿದರು.
ಮಹಾರುದ್ರಯಾಗದಲ್ಲಿ ಭಾಗಿಯಾಗಬೇಕೆಂಬ ಆಸೆಯನ್ನು ಗ್ರಾಮಸ್ಥರು ನೆರವೇರಿಸಿಕೊಟ್ಟಿದ್ದಾರೆ, ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಮುಖ್ಯ ಪುರೋಹಿತರಲ್ಲದೆ ತಾಲೂಕಿನ ಐವತ್ತಕ್ಕೂ ಹೆಚ್ಚು ಅರ್ಚಕರು, ಆಗಮಿಕರು ಸೇರಿ ಈ ಕಾರ್ಯವನ್ನು ನಡೆಸಿಕೊಟ್ಟಿದ್ದಾರೆ ಎಂದರು.
ತಿಪಟೂರು ಗುರುಕುಲದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಕರಡಿಗವಿ ಮಠದ ಶ್ರೀಗಳು, ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು ಇತರರು ಇದ್ದರು.