ಹಳೇಬೀಡಿನಲ್ಲಿ ಬೂತ್ ವಿಜಯ ಅಭಿಯಾನ

12hbd1
Published on

ಹಳೇಬೀಡು: ಭಾರತೀಯ ಜನತಾ ಪಕ್ಷದಿಂದ ಆರಂಭಿಸಿರುವ ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಬುಧವಾರ ಹಳೇಬೀಡಿನಲ್ಲಿ ಚಾಲನೆ ನೀಡಲಾಯಿತು.


ಬಿಜೆಪಿ ಮುಖಂಡ, ಮಾಜಿ ಮಂಡಲ ಅಧ್ಯಕ್ಷ ಕೊರಟಿಗೆರೆ ಪ್ರಕಾಶ್ ಪಟ್ಟಣದ ವಿವಿಧ ಬೂತ್‌ಗಳಲ್ಲಿ ಪಕ್ಷದ ಧ್ವಜ ಹಾರಿಸುವ ಮೂಲಕ ಅಭಿಯಾನ ಚಾಲನೆ ನೀಡಿದರು. ಸಂಜೆ ಆರಂಭವಾದ ಅಭಿಯಾನದಲ್ಲಿ ಮುಖಂಡರೊಂದಿಗೆ ಹೆಜ್ಜೆ ಹಾಕಿದ ಕಾರ್ಯಕರ್ತರು ರಾತ್ರಿ 8 ಗಂಟೆಯವರೆಗೂ ಹಳೇಬೀಡು ಗ್ರಾಮಪಂಚಾಯಿತಿಯ ಬಹಳಷ್ಟು ಬೂತ್‌ಗಳಿಗೆ ಭೇಟಿ ನೀಡಿದರು. ವಿವಿಧ ಬಡಾವಣೆಯ ಮನೆಗಳಿಗೆ ಭೇಟಿ ನೀಡಿ ಸರ್ಕಾರದ ಸಾಧನೆಗಳನ್ನು ವಿವರಿಸದರಲ್ಲದೆ, ಸೌಲಭ್ಯಗಳು ಸಕಾಲಕ್ಕೆ ಸರಿಯಾಗಿ ತಲುಪುತ್ತಿದೆಯೇ ಎನ್ನುವ ಬಗ್ಗೆ ವಿಚಾರಿಸಿದರು. ಮಧ್ಯವರ್ತಿಗಳ ಹಾವಳಿಯಿಂದ ಸರ್ಕಾರದ ಯೋಜನೆಗಳು ಫಲಾನುಭವಿಗಳನ್ನು ತಲುಪದಿದ್ದರೆ ಕಾರ್ಯಕರ್ತರ ಗಮನಕ್ಕೆ ತರಲು ವಿನಂತಿಸಿಕೊಂಡರು.


ಪ್ರಧಾನಮಂತ್ರಿ ನರೇಂದ್ರಮೋದಿ ಅವರ ದೂರದೃಷ್ಟಿಯ ಫಲವಾಗಿ ನಾವಿಂದು ಕೋವಿಡ್ ಹಾಗೂ ಆರ್ಥಿಕ ಹಿಂಜರಿತದಂತಹ ಸಂಕಷ್ಟದಿಂದ ಪಾರಾಗಿ ವಿಶ್ವದಲ್ಲಿ ಸುಸ್ಥಿರ ದೇಶವಾಗಿ ಬೆಳೆಯುತ್ತಿದ್ದೇವೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ಹಾಗೂ ಮಾಜಿ ಸಿ.ಎಂ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಾವು ಬೂತ್ ವಿಜಯ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದು ಸಂಪೂರ್ಣ ಜನರು ಮತ್ತು ಕಾರ್ಯಕರ್ತರನ್ನು ಬೆಸೆಯುವ ಕೊಂಡಿಯಾಗಿದೆ. ಬಿಜೆಪಿ ಶಾಸಕರು ಇಲ್ಲದ ಕಡೆ ಸರ್ಕಾರದ ಯೋಜನೆಗಳು ಸರಿಯಾಗಿ ಫಲಾನುಭವಿಗಳನ್ನು ತಲುಪುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿದೆ. ಹಾಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೇ ನೇರವಾಗಿ ಜನರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುವ ಮತ್ತು ಪರಿಸ್ಥಿತಿಯನ್ನು ಅವಲೋಕಿಸುವ ಕೆಲಸ ಮಾಡಲಿದ್ದಾರೆ. ಇದಕ್ಕೆ ಬೂತ್ ವಿಜಯ ಅಭಿಯಾನವು ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.


ಬಿಜೆಪಿ ಬೇಲೂರು ಮಂಡಲ ಅಧ್ಯಕ್ಷ ಅಡಗೂರು ಆನಂದ್ ಮಾತನಾಡಿ, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಜನರ ನಾಡಿ ಮಿಡಿತ ತಿಳಿದಿರುವ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗುತ್ತದೆ. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸುತ್ತಾರೆ ಎಂದರು.ಬೂತ್ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಮುಖಂಡರಾದ ರಮೇಶ್, ಕರಿಕಟ್ಟೆಹಳ್ಳಿ ಶಶಿಧರ, ಚೇತನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net