

ನಂಜನಗೂಡು: ದೇವನೂರು ಏತ ನೀರಾವರಿ ಯೋಜನೆಗೆ ಅನುಮೋದನೆ ದೊರೆತಿದ್ದು, ತಾಂತ್ರಿಕ ದೋಷದಿಂದ ವಿಳಂಬವಾಗಿದೆಯಾದರೂ ಹಳೇಗುಂಡ್ಲ ಚನ್ನಯ್ಯನ ಕೆರೆಗೂ ನೀರು ಹರಿಸುವುದಾಗಿ ಶಾಸಕ ದರ್ಶನ್ ಧ್ರುವನಾರಾಯಣ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರ ಧರಣಿ ಅಂತ್ಯಗೊಂಡಿದೆ.
ತಾಲೂಕಿನ ಹೆಡತಲೆ, ಹೆಮ್ಮರಗಾಲ, ಕುಂಬ್ರಳ್ಳಿ ವ್ಯಾಪ್ತಿಯ ಹಳೇ ಗುಂಡ್ಲ ಚೆನ್ನಯ್ಯನಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಹಲವು ದಿನಗಳಿಂದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಕೆರೆ ಆವರಣದಲ್ಲಿ ಆರಂಭಿಸಿದ್ದ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಬುಧವಾರ ರಾತ್ರಿ ದರ್ಶನ್ ಭೇಟಿ ನೀಡಿ, ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಿದರು.
ಕವಲಂದೆ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ಕುರಿತು ಮೊದಲ ಅಧಿವೇಶನದಲ್ಲಿ ಗಮನ ಸೆಳೆದಿದ್ದೆ. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 90 ಕೋಟಿ ರೂ. ವೆಚ್ಚದಲ್ಲಿ ದೇವನೂರು ಏತ ನೀರಾವರಿ ಯೋಜನೆಗೆ ಅನುಮೋದನೆ ಕೊಟ್ಟಿದ್ದಾರೆ. ಹೆಡತಲೆ, ಹೆಮ್ಮರಗಾಲ ಸೇರಿದಂತೆ ಸುತ್ತಮುತ್ತ ಬರಪೀಡಿತ ಪ್ರದೇಶವಾಗಿದ್ದು, ಈ ಭಾಗಕ್ಕೆ ನೀರಾವರಿ ಒದಗಿಸಬೇಕೆಂಬುದು ದಿ.ಧ್ರುವನಾರಾಯಣ ಅವರ ಆಶಯವಾಗಿತ್ತು. ಆದ್ದರಿಂದಲೇ ಮೊದಲನೇ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿದ ಪರಿಣಾಮ ಇಂದು ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ ದೊರೆತಿದೆ ಎಂದರು.
ಶೀಘ್ರ ಈ ಭಾಗದ ಎಲ್ಲ ಕೆರೆಗಳಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಬಳಿಕ ಪ್ರತಿಭಟನಾಕಾರರು ಧರಣಿ ಅಂತ್ಯಗೊಳಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಮುಖಂಡರಾದ ಇಮ್ಮಾವು ರಘು, ಸತೀಶ್, ದೊರೆಸ್ವಾಮಿ ನಾಯ್ಕ ಇತರರು ಹಾಜರಿದ್ದರು.