ಹಳೇ ಹುಬ್ಬಳ್ಳಿಯಲ್ಲಿ ಕಾಣದ ಗಂಭೀರತೆ

h26-Tippu Nagar 1
Published on

ಹುಬ್ಬಳ್ಳಿ: ಕರೊನಾ ಸೋಂಕು ಹಬ್ಬದಂತೆ ಮುನ್ನೆಚ್ಚರಿಕೆಯಾಗಿ ದೇಶದಾದ್ಯಂತ ಲಾಕ್​ಡೌನ್​ಗೆ ಕರೆ ನೀಡಿದ್ದರೂ ಹಳೇ ಹುಬ್ಬಳ್ಳಿಯಲ್ಲಿ ಇದರ ಎಳ್ಳಷ್ಟೂ ಪರಿಣಾಮ ಆಗದಿರುವುದು ಗುರುವಾರ ಮೇಲ್ನೋಟಕ್ಕೆ ಕಂಡುಬಂತು.

ಹಳೇ ಹುಬ್ಬಳ್ಳಿಯ ಇಸ್ಲಾಂಪುರ, ನೇಕಾರ ನಗರ, ಚೆನ್ನಪೇಟ, ಈಶ್ವರ ನಗರ, ಜಂಗ್ಲಿಪೇಟ, ಕಟಗರ ಓಣಿ, ಟಿಪು್ಪನಗರ ಸೇರಿ ಬಹುತೇಕ ಪ್ರದೇಶಗಳಲ್ಲಿ ಸಾರ್ವಜನಿಕರು ಕಟ್ಟೆಯ ಮೇಲೆ ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿರುವುದು, ಸುತ್ತಾಡುತ್ತಿರುವುದು, ಬೈಕ್ ಮೇಲೆ ಸಂಚರಿಸುತ್ತಿರುವುದು, ಮಕ್ಕಳು ರಸ್ತೆ ಹಾಗೂ ಉದ್ಯಾನದಲ್ಲಿ ಗುಂಪಾಗಿ ಆಟ ಆಡುತ್ತಿರುವ ದೃಶ್ಯ ಇಲ್ಲಿ ಸಾಮಾನ್ಯ ಎಂಬಂತಾಗಿದೆ.

ಕಸಬಾಪೇಟ ಹಾಗೂ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ಲಾಕ್​ಡೌನ್​ಗೂ ತಮಗೂ ಸಂಬಂಧವೇ ಇಲ್ಲವೆನ್ನುವಂತೆ ಜನರು ತಿರುಗಾಡುತ್ತಿದ್ದರು.

ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಪೊಲೀಸರು ಲಾಠಿ ಹಿಡಿದು ನಿಂತಿದ್ದರೂ, ರಸ್ತೆ ಮೇಲೆ ತಿರುಗದಂತೆ ಸಾರ್ವಜನಿಕರನ್ನು ಗದರಿಸದೆ ಮರ, ಕಟ್ಟಡಗಳ ನೆರಳಿಗೆ ತಮ್ಮಷ್ಟಕ್ಕೆ ತಾವು ಹರಟೆ ಹೊಡೆಯುತ್ತಿದ್ದರು.

ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಮತ್ತಿತರೆಡೆ ಪೊಲೀಸರು ಬೈಕ್, ಕಾರು ಸವಾರರು ಹಾಗೂ ಪಾದಚಾರಿಗಳನ್ನು ಬೆದರಿಸಿ ಮನೆಗೆ ಮರಳಿ ಕಳಿಸುತ್ತಿದ್ದರು. ಆದರೆ, ಹಳೇ ಹುಬ್ಬಳ್ಳಿಯಲ್ಲಿ ಪೊಲೀಸರು ಸಾರ್ವಜನಿಕರನ್ನು ಬೆದರಿಸುವ ಕೆಲಸಕ್ಕೆ ಮುಂದಾಗಲಿಲ್ಲ.

ಒಳರಸ್ತೆ ಬಂದ್ ಮಾಡಿದ ಸ್ಥಳೀಯರು: ಪೊಲೀಸರ ಹೆದರಿಕೆಯಿಂದ ಬೈಕ್ ಸವಾರರು ನೇಕಾರ ನಗರದ ಒಳ ರಸ್ತೆಗಳಲ್ಲಿ ಮನಬಂದಂತೆ ಓಡಾಡುತ್ತಿದ್ದಾರೆ ಎಂದು ಅಲ್ಲಿನ ಜನರು ಸ್ವಯಂ ಪ್ರೇರಿತವಾಗಿ ಅಡ್ಡವಾಗಿ ಒಳ ರಸ್ತೆ ಪ್ರವೇಶಿಸುವ ಸ್ಥಳದಲ್ಲಿ ಬೈಕ್​ಗಳು ಪ್ರವೇಶಿಸದಂತೆ ಕಟ್ಟಿಗೆಯ ಬಡಿಗೆ, ಕೋಲುಗಳನ್ನು ಕಟ್ಟಿದರು. ಕಳೆದ ಎರಡ್ಮೂರು ದಿನಗಳಿಂದ ಬೈಕ್ ಸವಾರರು ಪೊಲೀಸರ ಕಣ್ತಪ್ಪಿಸಿ ನೇಕಾರ ನಗರದ ಒಳ ರಸ್ತೆಗಳಲ್ಲಿ ವೇಗವಾಗಿ ನುಗ್ಗುತ್ತಿದ್ದಾರೆ. ಮಕ್ಕಳು, ವೃದ್ಧರು ಬೈಕ್ ಸವಾರರಿಗೆ ಹೆದರುವಂತಾಗಿದೆ. ಹೀಗಾಗಿ ರಸ್ತೆಗಳಿಗೆ ಅಡ್ಡವಾಗಿ ಬಡಿಗೆಗಳನ್ನು ಕಟ್ಟುತ್ತಿರುವುದಾಗಿ ಸ್ಥಳೀಯರು ತಿಳಿಸಿದರು.

ಎನ್​ಜಿಒ, ವೈಯಕ್ತಿಕ ದಾನಿಗಳ ನೋಂದಣಿ

ಧಾರವಾಡ: ಜನರಿಗೆ ಅಗತ್ಯ ಸೇವೆಗಳು ಹಾಗೂ ದಿನಬಳಕೆ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

ಈ ಮಧ್ಯೆ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಸಂತ್ರಸ್ತರು ಹಾಗೂ ಸಹಾಯದ ಅಗತ್ಯವಿರುವವರಿಗೆ ಆಹಾರ, ಬಟ್ಟೆ, ಮಾಸ್ಕ್, ಸ್ಯಾನಿಟೈಸರ್, ತರಕಾರಿ, ಹಣ್ಣು, ಸ್ವಯಂ ಸೇವೆ ನೀಡಲು ಆಸಕ್ತಿ ವ್ಯಕ್ತಪಡಿಸಿವೆ. ಜಿಲ್ಲೆಯಲ್ಲಿನ ಇಂತಹ ಸ್ವಯಂ ಸೇವಾ ಸಂಸ್ಥೆಗಳು ಅಥವಾ ವೈಯಕ್ತಿಕ ನೆರವು ನೀಡ ಬಯಸುವ ದಾನಿಗಳು ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ನೆರವು ನೀಡಬಹುದಾದ ವಸ್ತುಗಳು ಅಥವಾ ಸ್ವಯಂ ಸೇವಕರ ವಿವರಗಳನ್ನು ನಿಗದಿತ ನೋಂದಣಿ ನಮೂನೆಯಲ್ಲಿ ಭರ್ತಿ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದು. ಜಿಲ್ಲಾಡಳಿತದೊಂದಿಗೆ ಪರಿಹಾರ ಕಾರ್ಯದಲ್ಲಿ ತ್ವರಿತವಾಗಿ ಕೈ ಜೋಡಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿ (ಮೊ. 9480004212, 9880163211, 9663601465) ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಿಎಂ ಪರಿಹಾರ ನಿಧಿಗೆ ನೆರವು

ಹುಬ್ಬಳ್ಳಿ: ಮುಖ್ಯಮಂತ್ರಿಯವರ ಕೋವಿಡ್ ಪರಿಹಾರ ನಿಧಿಗೆ ಇಲ್ಲಿನ ಮಯೂರಿ ಗಾರ್ಡನ್ ನಿವಾಸಿ, ಬೆಂಗಳೂರು ಹೈಕೋರ್ಟ್ ವಕೀಲ ಪ್ರದೀಪ ಜೋಶಿ 10 ಸಾವಿರ ರೂ. ಹಾಗೂ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಕಾನ್​ಸ್ಟೇಬಲ್ ನಾಗರಾಜ ಕೆಂಚಣ್ಣವರ ವೈಯಕ್ತಿಕವಾಗಿ 5 ಸಾವಿರ ರೂ.ನೆರವು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net