ಹಳೇ ಸಮಸ್ಯೆಗೆ ಸಿಗಲಿ ಪರಿಹಾರ, ದೊಡ್ಡಬಳ್ಳಾಪುರ ನಗರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಾಗರಿಕರ ಮನವಿ

14 dbp 1
Published on

ದೊಡ್ಡಬಳ್ಳಾಪುರ: ನಗರದಲ್ಲಿ ಪ್ರಸ್ತುತ ಇರುವ ಸಮಸ್ಯೆಗಳನ್ನು ಬಗೆಹರಿಸಿದರೆ ಬಹುತೇಕ ಅಭಿವೃದ್ಧಿ ಕಾಣಬಹುದು. ಆದನ್ನು ಬಿಟ್ಟು ಹೊಸ ಯೋಜನೆಗಳ ಕಡೆ ಮುಖ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಬಹುತೇಕ ಸಾರ್ವಜನಿಕರು ಅಧಿಕಾರಿಗಳ ಗಮನ ಸೆಳೆದರು.

ಪುರಭವನದಲ್ಲಿ ಸೋಮವಾರ ಏರ್ಪಡಿಸಿದ್ದ ನಗರಸಭೆ ಬಜೆಟ್ ಕುರಿತ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ಹಲವರು ಅಭಿಪ್ರಾಯ ಹಂಚಿಕೊಂಡರು.

ಇದುವರೆಗೂ ಸಾರ್ವಜನಿಕರ ಸಲಹೆಗಳನ್ನು ಜಾರಿ ಮಾಡುವಲ್ಲಿ ನಗರಸಭೆ ಸೋತಿದೆ. ಬಜೆಟ್ ಮಂಡನೆಗೆ ಸಾರ್ವಜನಿಕರ ಸಲಹೆ ಪಡೆಯುವುದು ಕೇಲ ನಾಮಕಾವಸ್ತೆಗೆ ಎಂಬಂತಾಗಿದೆ ಎಂದು ಯುವ ಸಂಚಲನ ತಂಡದ ಸದಸ್ಯ ಚಿದಾನಂದ್ ಆರೋಪಿಸಿದರು.

ನಗರದಲ್ಲಿ ಅರಣ್ಯ ಇಲಾಖೆಯಿಂದ ಸುಮಾರು 2000 ಗಿಡ ನೆಟ್ಟಿದ್ದು, ಈ ಪೈಕಿ ಎಷ್ಟು ಮರಗಳಾಗಿವೆ ಎನ್ನುವ ಲೆಕ್ಕವೂ ನಗರಸಭೆಯಲ್ಲಿ ಇಲ್ಲ. ವಾತಾವರಣಕ್ಕೆ ಹೊಂದುವ ಸಸಿ ನೆಡುವುದರಿಂದ ಇಲ್ಲಿನ ಬಹುತೇಕ ಕೀಟ ಪ್ರಭೇದಗಳು, ಪಕ್ಷಿ ಪ್ರಭೇದಗಳನ್ನು ರಕ್ಷಿಸಿದಂತಾಗುತ್ತದೆ. ನೀರಿನ ಸಮಸ್ಯೆ ಬಗೆಹರಿಸಲು ಮನೆಗಳಿಗೆ ಮಳೆಕೊಯ್ಲು ಅಳವಡಿಸಿಕೊಳ್ಳವಲ್ಲಿ ನಗರಸಭೆ ಕ್ರಿಯಾತ್ಮಕವಾಗಿ ಕಾರ‌್ಯ ನಿರ್ವಹಿಸಬೇಕು ಎಂದರು.

ಕೆರೆಯಲ್ಲಿ ಒಳಚರಂಡಿ: ನಾಗರಕೆರೆಯಲ್ಲಿ ಸುಮಾರು 27 ಮ್ಯಾನ್ ಹೋಲ್‌ಗಳು ಇವೆ. ಇದರಿಂದಾಗಿ ಮ್ಯಾನ್ ಹೋಲ್‌ನಲ್ಲಿನ ಕೊಳಚೆ, ಮಗ್ಗಗಳ ನೂಲಿಗೆ ಹಚ್ಚುವ ವಿಷಯುಕ್ತ ಬಣ್ಣದ ನೀರು ಕೆರೆಗೆ ಸೇರುತ್ತಿದೆ. ಕೂಡಲೇ ಕೆರೆಯಲ್ಲಿನ ಮ್ಯಾನ್‌ಹೋಲ್‌ಗಳನ್ನು ತೆರವು ಮಾಡಬೇಕು ಒಳಚರಂಡಿ ಅವ್ಯವಸ್ಥೆ ಸರಿಪಡಿಸಲು ನಗರಸಭೆ ಗಮನ ಹರಿಸಲಿ ಎಂದು ಚಿದಾನಂದ್ ತಿಳಿಸಿದರು.

ನಗರಸಭೆ ಆಸ್ತಿ ಉಳಿಸಿ: ಸರ್ಕಾರಿ ಆಸ್ತಿಗಳಿಗೆ ಬೇಲಿ ತಂತಿ ಹಾಕಲು 25 ಲಕ್ಷ ರೂಪಾಯಿ ಮೀಸಲಿಟ್ಟಿದ್ದರೂ ಇದುವರೆಗೆ ನಗರಸಭೆ ಈ ಕಡೆ ಗಮನ ಹರಿಸಿಲ್ಲ. ಈ ಮೂಲಕ ನಗರಸಭೆ ಆಡಳಿತ ಅಭಿವೃದ್ಧಿ ಪರ ಇದೆಯಾ ಎಂಬ ಅನುಮಾನ ಕಾಡತೊಡಗಿದೆ ಎಂದು ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸದಸ್ಯ ವೆಂಕಟರಾಜು ಆರೋಪಿಸಿದರು.

ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ, ರಸ್ತೆ ಒತ್ತುವರಿ ತೆರವು, ವಿಸ್ತರಣೆ, ರಸ್ತೆ ವೃತ್ತಗಳ ಅಭಿವೃದ್ಧಿ, ಕ್ರೀಡಾಂಗಣ ಅಭಿವೃದ್ಧಿ ಕುರಿತಂತೆ ಚರ್ಚೆಗಳು ನಡೆದವು.

ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮಿನಾರಾಯಣ, ಉಪಾಧ್ಯಕ್ಷೆ ಫರ್ಹಾನತಾಜ್, ಆಯುಕ್ತ ಕೆ.ಜಿ.ಶಿವಶಂಕರ್, ನಗರಸಭೆ ಸದಸ್ಯರಾದ ತ.ನ.ಪ್ರಭುದೇವ್, ಕರವೇ ಕನ್ನಡಿಗರ ಬಣದ ಬಿ.ಎಸ್.ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹದೇವ್ ಇದ್ದರು.

ನಗರಸಭೆ ಆದಾಯಕ್ಕೆ ಧಕ್ಕೆ: ಅಂಗಡಿ ಬಾಡಿಗೆ 2.13 ಕೋಟಿ ರೂಪಾಯಿ ಬಾಕಿ ಉಳಿದಿದ್ದು, ಕೇವಲ 42 ಲಕ್ಷ ರೂಪಾಯಿ ವಸೂಲಿಯಾಗಿದೆ. ಕಟ್ಟಡ ಪರವಾನಗಿ 11.68 ಲಕ್ಷ ರೂಪಾಯಿ ವಸೂಲಿಯಾಗಬೇಕಿತ್ತು. ಆದರೆ ಇದುವರೆಗೂ 3.18 ಲಕ್ಷ ರೂಪಾಯಿ ವಸೂಲಿ ಆಗಿದೆ. ಆದರೂ ಕಟ್ಟಡಗಳ ನಿರ್ಮಾಣ ನಡೆಯುತ್ತಲೆ ಇದೆ. ಹೀಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಬಾಡಿಗೆ, ಒಳ ಚರಂಡಿ ಸಂಪರ್ಕ ಶುಲ್ಕಗಳ ವಸೂಲಿ ವಿಳಂಬದಿಂದ ನಗಸಭೆ ಆದಾಯಕ್ಕೆ ಧಕ್ಕೆ ಬಂದಂತಾಗಿದೆ. ಇನ್ನು ನಗರದಲ್ಲಿ ಸಿಸಿಟಿವಿ ಅಳವಡಿಕೆಗೆ 24 ಲಕ್ಷ ರೂಪಾಯಿ ಮೀಸಲಿಟ್ಟಿದ್ದರೂ ಇದುವರೆಗೂ ಯಾವುದೇ ಸಿಸಿಟಿವಿ ಅಳವಡಿಕೆಯಾಗಿಲ್ಲ. ಇನ್ನು ನಲ್ಲಿಗಳ ಅಳವಡಿಕೆಯಲ್ಲೂ ಶುಲ್ಕ ವಸೂಲಿ ಮಾಡುವಲ್ಲಿ ನಗರಸಭೆ ಸೋತಿದೆ ಎಂದು ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸದಸ್ಯ ವೆಂಕಟರಾಜು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net