

ಸಾಗರ: ಹಿಂದಿನ ಶಾಸಕರ ಅವಧಿಯಲ್ಲಿ ಬಿಡುಗಡೆಯಾದ ಅನುದಾನದ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸುತ್ತಿರುವುದೇ ಸ್ಥಳೀಯ ಶಾಸಕರ ಎರಡು ವರ್ಷದ ಸಾಧನೆ. ಕ್ಷೇತ್ರಕ್ಕೆ ಯಾವುದೇ ಹೊಸ ಯೋಜನೆಯನ್ನು ಈಗಿನ ಶಾಸಕರು ತಂದಿಲ್ಲ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ಹೇಳಿದರು. ಕೇಂದ್ರ ಸರ್ಕಾರದ ಅನುದಾನದಲ್ಲಿ ಮಂಜೂರಾದ ತುಮರಿ ಸೇತುವೆ ಕಾಮಗಾರಿ ಮುಗಿಯುತ್ತ ಬಂದಿದೆ. ಆದರೆ ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಮಂಜೂರಾಗಿ, ಹಾಲಿ ಶಾಸಕರು ಎರಡು ವರ್ಷ ಪೂರೈಸಿದರೂ ಹಸಿರುಮಕ್ಕಿ ಸೇತುವೆ ಕಾಮಗಾರಿ ಏಕೆ ಮುಗಿದಿಲ್ಲ ಎಂಬುದನ್ನು ಶಾಸಕರು ಬಹಿರಂಗಪಡಿಸಲಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸವಾಲೆಸೆದರು. ತಿರಂಗಾ ಯಾತ್ರೆಯಲ್ಲಿ ಪಾಕಿಸ್ತಾನಕ್ಕೆ ದಿಕ್ಕಾರ ಕೂಗಿದರೆ ನಗರ ಕಾಂಗ್ರೆಸ್ ಅಧ್ಯಕ್ಷರಿಗೆ ಕಸಿವಿಸಿ ಆಗುತ್ತದೆ. ಪಾಕಿಸ್ತಾನಕ್ಕೆ ದಿಕ್ಕಾರ ಕೂಗಿದರೆ ಸುರೇಶಬಾಬು ಅವರಿಗೆ ಯಾಕೆ ಮುಜುಗರ ಉಂಟಾಗುತ್ತದೆ ಎಂದು ಪ್ರಶ್ನಿಸಿದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಹಿಂದಿನ ಶಾಸಕರ ಅವಧಿಯಲ್ಲಿ ಮಂಜೂರಾಗಿದ್ದ ನಗರೋತ್ಥಾನ ಯೋಜನೆಯ 30 ಕೋಟಿ ರೂ., ವಿಶೇಷ ಅನುದಾನ 7 ಕೋಟಿ, ನಗರಸಭೆ ಅನುದಾನ ಹಾಗೂ ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಶಾಸಕರು ಎರಡು ವರ್ಷದಲ್ಲಿ ನಗರಸಭೆಗೆ ಬಿಡಿಗಾಸನ್ನೂ ತಂದಿಲ್ಲ. ಕ್ಯಾಬಿನೆಟ್ ದರ್ಜೆಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕರು ಅದರಿಂದಲೂ ಅನುದಾನ ತಂದಿಲ್ಲ ಎಂದು ಲೇವಡಿ ಮಾಡಿದರು. ಹರತಾಳು ಹಾಲಪ್ಪ ಎಂಎಸ್‌ಐಎಲ್ ಅಧ್ಯಕ್ಷರಾಗಿದ್ದಾಗ ಆಸ್ಪತ್ರೆ, ಜ್ಯೂನಿಯರ್ ಕಾಲೇಜಿಗೆ ಲ್‌ಟಿ ಸೇರಿ ಅನೇಕ ಯೋಜನೆಗಳಿಗೆ ಹಣ ಮಂಜೂರು ಮಾಡಿಸಿದ್ದರು. ನಗರ ವ್ಯಾಪ್ತಿಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಗೋ ಕಳವು ಪ್ರಕರಣಗಳು ಜಾಸ್ತಿಯಾಗಿವೆ. ಶರಾವತಿ ಹಿನ್ನೀರಿನಲ್ಲಿ ಸಿದ್ದಯ್ಯ ಎಂಬುವವರ ಶವ ಅನುಮಾನಾಸ್ಪದ ರೀತಿ ಪತ್ತೆಯಾಗಿದೆ. ಶಾಸಕರು ಬಿಜೆಪಿಯನ್ನು ಬೈಯುತ್ತ ತಿರುಗುವುದೇ ಸಾಧನೆ ಎಂದುಕೊಂಡಿದ್ದಾರೆ. ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಮಗೆ ತೃಪ್ತಿ ತಂದಿಲ್ಲ. ಕ್ಷೇತ್ರದ ಶಾಸಕರು ತಾಲೂಕು ಆಡಳಿತವನ್ನು ಸರಿಪಡಿಸಲಿ ಎಂದರು. ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಸದಸ್ಯರಾದ ಮಧುರಾ ಶಿವಾನಂದ್, ಪ್ರೇಮ ಸಿಂಗ್, ಬಿಜೆಪಿ ಪ್ರಮುಖರಾದ ಎಚ್.ಎಸ್.ರಮೇಶ್, ಕೆ.ಸತೀಶ್, ಸಂತೋಷ್, ಕೆ.ಎಸ್.ಗೌತಮ್ ಇತರರಿದ್ದರು.
ಜನನ-ಮರಣ ಪ್ರಮಾಣ ಪತ್ರ, ಕೃಷಿ ಪಂಪ್‌ಸೆಟ್ ಅಕ್ರಮ-ಸಕ್ರಮ ದರವನ್ನು ವಿಪರೀತ ಹೆಚ್ಚಿಸಲಾಗಿದೆ. ಪ್ರಕೃತಿ ವಿಕೋಪದಿಂದ ಮನೆ ಬಿದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಈಗಿನ ಸರ್ಕಾರ ಅದನ್ನು 1.25 ಲಕ್ಷ ರೂ.ಗೆ ಇಳಿಸಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರತಿ ಗ್ರಾಪಂಗೆ 1 ಕೋಟಿ ರೂ. ಅನುದಾನ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಇದನ್ನು ದಾಖಲೆ ಸಹಿತ ಜನರಿಗೆ ತಿಳಿಸಲಿ. ದೇವೇಂದ್ರಪ್ಪ ಯಲಕುಂದ್ಲಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ