

ಧಾರವಾಡ: ಆನ್‌ಲೈನ್‌ನಲ್ಲಿ ಮೊಬೈಲ್ ಖರೀದಿಸಿದ್ದ ಗ್ರಾಹಕನಿಗೆ ಹಳೇ ಮೊಬೈಲ್ ಕೊಟ್ಟಿದ್ದ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಽಸಿ ಆದೇಶಿಸಿದೆ. ಇಲ್ಲಿನ ಬಸವನಗರದ ನಿವಾಸಿ ಕಿರಣಕುಮಾರ ಎಂಬುವರು ೨೦೨೨ರ ಅ. ೨೦ರಂದು ಫ್ಲಿಪ್‌ಕಾರ್ಟ್ ಮೂಲಕ ೨೬,೯೯೦ ಮೌಲ್ಯದ ಮೊಬೈಲ್ ಖರೀದಿಸಿದ್ದರು. ೨೪ರಂದು ಮೊಬೈಲ್ ತಲುಪಿದಾಗ ಬಾಕ್ಸ್ ತೆರೆದು ನೋಡಿದಾಗ ಹಳೆಯ ಮೊಬೈಲ್ ಹ್ಯಾಂಡ್‌ಸೆಟ್ ಆಗಿತ್ತು.
ಈ ವಿಷಯವನ್ನು ಎದುರುದಾರರಿಗೆ ತಿಳಿಸಿದ್ದ ಕಿರಣಕುಮಾರ, ಹೊಸ ಹ್ಯಾಂಡ್‌ಸೆಟ್ ಕೊಡುವಂತೆ ವಿನಂತಿಸಿದ್ದರು. ಅವರ ವಿನಂತಿಯನ್ನು ಎದುರುದಾರರು ತಿರಸ್ಕರಿಸಿದ್ದರು. ಫ್ಲಿಪ್‌ಕಾರ್ಟ್ ಮತ್ತು ಅದನ್ನು ಸರಬರಾಜು ಮಾಡಿದ ಕಂಪನಿಯಿAದ ಮೋಸವಾಗಿದೆ ಎಂದು ಕಿರಣಕುಮಾರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಕಂಪನಿಯು ಗ್ರಾಹಕನಿಗೆ ಬಳಕೆಯಾದ ಹಳೇ ಮೊಬೈಲ್ ಸೆಟ್ ಸರಬರಾಜು ಮಾಡಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊಬೈಲ್ ಸರಬರಾಜು ಮಾಡಿದ್ದ ಬೆಂಗಳೂರಿನ ಲಾಸ್ಟೋರ್ ಕಂಪನಿಯು ದೂರುದಾರನಿಗೆ ತಿಂಗಳೊಳಗೆ ಹೊಸ ಮೊಬೈಲ್ ಕೊಡಬೇಕು. ವಿಫಲರಾದರೆ ಮೊಬೈಲ್ ಮೌಲ್ಯ ೨೬,೯೯೦ ರೂ.ಗಳನ್ನು ಶೇ. ೮ರ ಬಡ್ಡಿ ಸಮೇತ ಕೊಡಬೇಕು. ದೂರುದಾರನಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗೆ ೧೫,೦೦೦ ರೂ. ಪರಿಹಾರ ಮತ್ತು ಪ್ರಕರಣದ ಖರ್ಚು ೫,೦೦೦ ರೂ. ಕೊಡಬೇಕು ಎಂದು ಆದೇಶಿಸಿದೆ.