ಹಳೇ ಮೀಸಲಾತಿ ಮುಂದುವರಿಸದಿದ್ದಲ್ಲಿ ಹೋರಾಟ

E911EA1D-C5E6-465A-B125-C29516C4B242
Published on

ಚಿಕ್ಕಬಳ್ಳಾಪುರ : ನಗರಸಭಾ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಪರಿಶಿಷ್ಟ ಜಾತಿಯಿಂದ ಸಾಮಾನ್ಯ ವರ್ಗಕ್ಕೆ ಬದಲಾಯಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಸಚಿವ ಡಾ ಕೆ.ಸುಧಾಕರ್ ಹುನ್ನಾರದಿಂದ ದಲಿತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದೆ.

ಮೊದಲು ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ನಿಗದಿಪಡಿಸಲಾಗಿತ್ತು. ಆದರೆ, ಸಚಿವ ಸುಧಾಕರ್ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಮೀಸಲಾತಿಯನ್ನು ಬದಲಾವಣೆ ಮಾಡಿಸಿದ್ದಾರೆ ಎಂದು ನಗರದ ಪತ್ರಕರ್ತರ ಭವನದಲ್ಲಿ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಆರೋಪಿಸಿದರು.

ದಲಿತರ ಮತ ಪಡೆದು ಶಾಸಕರಾದ ಡಾ.ಕೆ.ಸುಧಾಕರ್ ಸಚಿವರಾಗಿ ಅಧಿಕಾರಕ್ಕೇರಿದ ಬಳಿಕ ದಲಿತರ ವಿರುದ್ಧ ದಮನಕಾರಿ ನೀತಿ ಅನುಸರಿಸುತ್ತಿದ್ದು ನಗರಸಭೆ ಮೀಸಲಾತಿ ಬದಲಾಯಿಸುವ ಮೂಲಕ ದಲಿತ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ದಲಿತರಿಗೆ ಅನ್ಯಾಯ ಮಾಡಿದ್ದಾರೆ. ಅವರಿಗೆ ಶೋಷಿತ ವರ್ಗದ ಶಾಪ ತಟ್ಟುತ್ತದೆ ಎಂದು ಕಿಡಿಕಾರಿದರು.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ದಲಿತರು ಉನ್ನತ ಸ್ಥಾನಮಾನ ಪಡೆಯಲು ಅವಕಾಶವಿಲ್ಲ ಎಂಬುದು ನಗರಸಭಾ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆಯಿಂದ ಸಾಬೀತಾಗಿದೆ. ಇಲ್ಲಿನ ನಗರಸಭೆಯಲ್ಲಿ ಪರಿಶಿಷ್ಟ ಜಾತಿಯ 6 ಮಂದಿ ಆಯ್ಕೆಯಾಗಿದ್ದು ಅಧ್ಯಕ್ಷರಾಗುವ ಅವಕಾಶ ತಪ್ಪಿದೆ. ಹಳೇ ಮೀಸಲಾತಿಯನ್ನು ಮುಂದುವರಿಸದಿದ್ದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಸದಸ್ಯ ಕಣಿತಹಳ್ಳಿ ವೆಂಕಟೇಶ್ ಮಾತನಾಡಿ, ಕ್ಷೇತ್ರದಲ್ಲಿ ವಿರೋಧಿಗಳನ್ನು ಮಟ್ಟ ಹಾಕಲು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದರ ನಡುವೆ ಸಚಿವರು ದಲಿತರ ನಂಬಿಕೆಗೆ ಮಸಿ ಬಳಿಯುತ್ತಿದ್ದಾರೆ ಎಂದು ಆರೋಪಿಸಿದರು.

ಎಪಿಎಂಸಿ ನಿರ್ದೇಶಕ ಮಿಲ್ಟನ್ ವೆಂಕಟೇಶ್ ಮಾತನಾಡಿ, ಹಿಂದೆ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಪರಿಶಿಷ್ಟ ಜಾತಿಯವರನ್ನು ಹೊರತುಪಡಿಸಿ, ಇತರ ಸಮುದಾಯದವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಮೀಸಲಾತಿಯಿಂದ ಪರಿಶಿಷ್ಟ ಜಾತಿಯ ಸದಸ್ಯರಿಗೆ ಅವಕಾಶ ಸಿಕ್ಕಿತ್ತು. ಇದನ್ನು ಉದ್ದೇಶಪೂರ್ವಕವಾಗಿ ತಪ್ಪಿಸಲಾಗಿದೆ ಎಂದು ದೂರಿದರು.

ಜಿ.ಪಂ ಸದಸ್ಯ ಪ್ರಕಾಶ್, ನಗರಸಭೆ ಸದಸ್ಯರಾದ ಎಸ್.ಎಂ.ರಫೀಕ್, ಅಂಬರೀಷ್, ದೀಪಕ್, ಅ್ಜಲ್, ರಾಜಶೇಖರ್, ಮಂಜುನಾಥ್, ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಪ್ರಧಾನ ಕಾರ್ಯದರ್ಶಿ ವಿ.ಸುರೇಶ್, ಮುಖಂಡ ಯಲುವಳ್ಳಿ ಎನ್.ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net