

ಗದಗ:ನವೀಕೃತಗೊಂಡಿರುವ ಹಳೇ ಬಸ್ ನಿಲ್ದಾಣಕ್ಕೆ ಡಾ. ಪಂಡಿತ ಪುಟ್ಟರಾಜ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲು ಕ್ರಮಕೈಗೊಳ್ಳಬೇಕೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅವರಿಗೆ ಪತ್ರ ಬರೆದಿದ್ದಾರೆ.
ಗದಗ ನಗರದ ಹಳೇ ಬಸ್ ಪಂಡಿತ ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ಅನೇಕ ಸಂಘ ಸಂಸ್ಥೆಗಳು ಮನವಿ ಮಾಡಿದ್ದವು. ಬೇಡಿಕೆ ನ್ಯಾಯೋಜಿತವಾಗಿದ್ದು, ನಿಯಮಾನುಸಾರ ಅಗತ್ಯ ಕ್ರಮಕೈಗೊಳ್ಳಬೇಕೆಂದು ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಹೆಸರು ನಾಮಕರಣಕ್ಕೆ ಆಗ್ರಹ: ನವೀಕೃತಗೊಂಡಿರುವ ಹಳೇ ಬಸ್ ನಿಲ್ದಾಣಕ್ಕೆ ಡಾ. ಪಂಡಿತ ಪುಟ್ಟರಾಜ ಬಸ್ ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಕ್ರಾಂತಿಸೇನಾ ಸಂಘಟನೆ ಹಾಗೂ ಸ್ನೇಹ ಬಳಗ ಸಂಘಟನೆಯ ಪದಾಧಿಕಾರಿಗಳು ಹಳೇ ಬಸ್ ನಿಲ್ದಾಣದ ಎದುರು ಅಹೋ ರಾತ್ರಿ ಧರಣಿ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಮನವಿಯನ್ನು ಸರ್ಕಾರಕ್ಕೆ ಕಳಿಸಲಾಗುವುದು, ಸರ್ಕಾರ ನೀಡಿದ ನಿರ್ದೇಶನದಂತೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಈ ಸಂದರ್ಭದಲ್ಲಿ ಕ್ರಾಂತಿಸೇನಾ ಜಿಲ್ಲಾಧ್ಯಕ್ಷ ಬಾಬು ಬಾಕಳೆ ಹಾಗೂ ಸ್ನೇಹ ಬಳಗ ಮಾರ್ಗದರ್ಶಕ ಬಾಬು ಶಿದ್ಲಿಂಗ, ಸಯ್ಯದ್ ಖಾಲಿದ ಕೊಪ್ಪಳ, ಭೀಮಾ ಕಾಟಿಗರ, ಪ್ರವೀಣ ಜಿತೂರಿ ಭೀಮಾ ಕಾಟಿಗರ, ಅಬ್ದುಲ್ ಮುನಾಫ ಮುಲ್ಲಾ ಹಾಗೂ ಹಲವು ಸಂಘಟನೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಉಪಸ್ಥಿತರಿದ್ದರು.