ಹಳೇ ಬಸ್ ನಿಲ್ದಾಣ ಸ್ಥಳಾಂತರ ಫೆ. 1ರಂದು

h14-Bus Stand 1
Published on

ಸಂತೋಷ ವೈದ್ಯ ಹುಬ್ಬಳ್ಳಿ

ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಲ್ಲಿ ಹೊಸ ಲುಕ್ ಪಡೆಯಲಿರುವ ಹಳೇ ಬಸ್ ನಿಲ್ದಾಣದಿಂದ ಸಾರಿಗೆ ಸೇವೆಯು ಫೆಬ್ರವರಿ 1ರಿಂದ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಕನಿಷ್ಠ ಮುಂದಿನ 2 ವರ್ಷಗಳ ಕಾಲ ಪ್ರಯಾಣಿಕರು ಈ ಬದಲಾವಣೆಗೆ ಹೊಂದಿಕೊಳ್ಳಬೇಕು.

ಪೂರ್ಣ ಪ್ರಮಾಣದಲ್ಲಿ ಬಸ್​ಗಳ ಕಾರ್ಯಾಚರಣೆ ಹಾಗೂ ಪ್ರಯಾಣಿಕರ ದಟ್ಟಣೆಯಿಂದ ಸದಾ ಗಿಜುಗುಡುತ್ತಿದ್ದ ಹಳೇ ಬಸ್ ನಿಲ್ದಾಣ 2020ರ ಮೇ ತಿಂಗಳಿಂದ ಗ್ರಾಮೀಣ ಸಾರಿಗೆ, ನಗರ ಸಾರಿಗೆ ಹಾಗೂ ನಿರ್ದಿಷ್ಟ ದೂರದ ಮಾರ್ಗಗಳು ಹಾಗೂ ಕೆಲ ಬಿಆರ್​ಟಿಎಸ್ ಬಸ್ ಓಡಾಟಕ್ಕೆ ಸೀಮಿತಗೊಂಡಿತ್ತು. ಅಂದಿನಿಂದ ಬಹುತೇಕ ದೂರ ಮಾರ್ಗಗಳ ಸಾರಿಗೆ ಸಂಚಾರವನ್ನು ಗೋಕುಲ ರಸ್ತೆ ಬಸ್ ನಿಲ್ದಾಣ ಹಾಗೂ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.

ಇದೀಗ ಹಳೇ ಬಸ್ ನಿಲ್ದಾಣದ ಸಂಪೂರ್ಣ ಸಾರಿಗೆ ಕಾರ್ಯಾಚರಣೆಯನ್ನು ಗೋಕುಲ ರಸ್ತೆ ಬಸ್ ನಿಲ್ದಾಣ ಹಾಗೂ ಹೊಸೂರಿನ ಪ್ರಾದೇಶಿಕ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸುವುದೊಂದೇ ಮುಂದಿರುವ ಮಾರ್ಗ. ಎರಡೂ ನಿಲ್ದಾಣಗಳಲ್ಲಿ ಜಾಗದ ಸಮಸ್ಯೆಯಿಲ್ಲ. ನೂರಾರು ಬಸ್ ನಿಲ್ಲಲು, ಆಗಮನ-ನಿರ್ಗಮನಕ್ಕೆ ವಿಶಾಲ ಸ್ಥಳಾವಕಾಶವಿದೆ. ಕೆಲ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದೆ.

‘ಪ್ರಯಾಣಿಕರ ಹಿತದೃಷ್ಟಿಯಿಂದ ಯಾವ ಮಾರ್ಗದ ಸಾರಿಗೆ ಬಸ್ ಸಂಚಾರವನ್ನು ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಅಥವಾ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಆರಂಭಿಸಬೇಕು ಎಂಬುದನ್ನು ನಿರ್ಧರಿಸಬೇಕಿದೆ. ಗ್ರಾಮೀಣ, ಉಪನಗರ, ಕೆಲ ಬಿಆರ್​ಟಿಎಸ್ ಬಸ್​ಗಳ ಕಾರ್ಯಾಚರಣೆ ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕಿದೆ. ಕೆಲ ದಿನಗಳಲ್ಲಿಯೇ ಹುಬ್ಬಳ್ಳಿ ಗ್ರಾಮೀಣ ವಿಭಾಗ, ನಗರ ಸಾರಿಗೆ ವಿಭಾಗ ಹಾಗೂ ವಾಕರಸಾ ಸಂಸ್ಥೆಯ ಕೇಂದ್ರ ಕಚೇರಿ ಅಧಿಕಾರಿಗಳು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಅವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಹಳೇ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿ ಸಂಸ್ಥೆಗೆ ಹಸ್ತಾಂತರಿಸುವಂತೆ ಜ. 28ರ ಗಡುವು ನಿಗದಿಪಡಿಸಿ ಅಧಿಕಾರಿಗಳು 2 ತಿಂಗಳ ಹಿಂದೆಯೇ ಮಳಿಗೆದಾರರಿಗೆ ನೋಟಿಸ್ ಜಾರಿ ಮಾಡಿದ್ದರು.

36.16 ಕೋಟಿ ರೂ. ವೆಚ್ಚ
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 36.16 ಕೋ. ರೂ. ಅನುದಾನದಲ್ಲಿ ಹಳೇ ಬಸ್ ನಿಲ್ದಾಣ ಹೊಸ ಲುಕ್ ಪಡೆಯಲಿದೆ. ಬೇಸ್​ವೆುಂಟ್​ನಲ್ಲಿ ರ್ಪಾಂಗ್, ಕೆಳ ನೆಲ ಮಹಡಿ (ಎಲ್​ಜಿಎಫ್)ಯಲ್ಲಿ ಬಿಆರ್​ಟಿಎಸ್ ಹಾಗೂ ನಗರ ಸಾರಿಗೆ ಬಸ್ ಲೇನ್, ಮೇಲ್ಮಹಡಿ (ಯುಜಿಎಫ್)ಯಲ್ಲಿ ಗ್ರಾಮೀಣ ಬಸ್ ಲೇನ್ ಬರಲಿದೆ. ಪ್ರಯಾಣಿಕರು ಬೇಸ್​ವೆುಂಟ್​ನಿಂದ ಮೇಲ್ಮಹಡಿಯವರಿಗೆ ಬರಲು ರ‍್ಯಾಂಪ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹು-ಧಾ ರಸ್ತೆಗೆ ಮುಖ ಮಾಡಿ ವಾಣಿಜ್ಯ ಮಳಿಗೆಗೆ ಅವಕಾಶ ಒದಗಿಸಲಾಗುತ್ತಿದೆ. ಕಾಮಗಾರಿ ಅವಧಿ 2 ವರ್ಷ ನಿಗದಿಪಡಿಸಲಾಗಿದೆ.

ಕಾಮಗಾರಿಗೆ ಮರು ಟೆಂಡರ್ ಕರೆದಿರುವುದು ವಿಳಂಬಕ್ಕೆ ಕಾರಣವಾಗಿದೆ. ಮೊದಲ ಬಾರಿ ಕರೆದಾಗ ಸೌರ ವಿದ್ಯುತ್ ಉತ್ಪಾದನೆ ವಿಷಯ ಜೋಡಿಸಿರಲಿಲ್ಲ. ಹೊಸದಾಗಿ ನಿರ್ವಣವಾಗಲಿರುವ ಹಳೇ ಬಸ್ ನಿಲ್ದಾಣದ ಕಟ್ಟಡದ ಚಾವಣಿ ಮೇಲೆ ಸೌರ ವಿದ್ಯುತ್ ಘಟಕ ಬರಲಿದೆ. ಈ ಸಂಬಂಧ ಕರೆದಿರುವ ಮರು ಟೆಂಡರ್ ಇನ್ನೂ ಅಂತಿಮಗೊಂಡಿಲ್ಲ. ಮೌಲ್ಯಮಾಪನ ಹಂತದಲ್ಲಿದೆ. ಮೊದಲ ಬಾರಿ ಟೆಂಡರ್ ಕರೆದಾಗ ಹಳೇ ಬಸ್ ನಿಲ್ದಾಣವನ್ನು ಜ. 15ರೊಳಗೆ ಹಸ್ತಾಂತರಿಸುವಂತೆ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ, ವಾಕರಸಾ ಸಂಸ್ಥೆಗೆ ಸೂಚಿಸಿತ್ತು.

ಹಳೇ ಬಸ್ ನಿಲ್ದಾಣ ನವೀಕರಣ ಕಾಮಗಾರಿಯ ಟೆಂಡರ್ (2ನೇ ಕರೆ) ಮೌಲ್ಯಮಾಪನ ಹಂತದಲ್ಲಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ 8-10 ದಿನಗಳು ಬೇಕಾಗಲಿವೆ. ನಿರ್ದಿಷ್ಟ ದಿನಕ್ಕೆ ಹಳೇ ಬಸ್ ನಿಲ್ದಾಣ ಹಸ್ತಾಂತರಿಸುವಂತೆ ವಾಕರಸಾ ಸಂಸ್ಥೆಗೆ ಈ ಬಾರಿ ಸೂಚಿಸಿಲ್ಲ. ಮೊದಲ ಬಾರಿ ಟೆಂಡರ್ ಕರೆದಾಗ ಜ. 15ರೊಳಗೆ ಹಸ್ತಾಂತರಿಸುವಂತೆ ಸೂಚಿಸಿದ್ದು ನಿಜ. ಎಸ್.ಎಚ್. ನರೇಗಲ್, ವಿಶೇಷಾಧಿಕಾರಿ, ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net