ಹಳೇ ಪಿಂಚಣಿ ಸೌಲಭ್ಯಕ್ಕೆ ಆಗ್ರಹ

pinchani sang
Published on

ಬೀದರ್: 2006ಕ್ಕೂ ಮೊದಲು ಹಾಗೂ ನಂತರ ನೇಮಕಗೊಂಡ ಅನುದಾನಿತ ಶಾಲಾ, ಕಾಲೇಜು ನೌಕರರಿಗೂ ಪಿಂಚಣಿ ಸೌಲಭ್ಯ ಕಲ್ಪಿಸಲು ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಆಗ್ರಹಿಸಿದೆ.

ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ನಿಯೋಗ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿಪತ್ರ ಸಲ್ಲಿಸಿತು. 2006ರ ಏಪ್ರಿಲ್ 1ಕ್ಕೆ ಮುನ್ನ ರಾಜ್ಯದಲ್ಲಿ ಪಿಂಚಣಿ ವಿಚಾರದಲ್ಲಿ ಸರ್ಕಾರಿ ಹಾಗೂ ಅನುದಾನಿತ ನೌಕರರ ನಡುವೆ ಯಾವುದೇ ತಾರತಮ್ಯ ಇರಲಿಲ್ಲ. ಆದರೆ, ನಂತರ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರನ್ನು ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಅಥವಾ ವಂತಿಗೆ ಆಧರಿತ ನೂತನ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿಲ್ಲ. ಹೀಗಾಗಿ ಸಾವಿರಾರು ನೌಕರರು ಕೊನೆಯ ತಿಂಗಳ ವೇತನ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತರಾಗಿದ್ದಾರೆ ಎಂದು ಹೇಳಿದರು.

ಪಿಂಚಣಿಯಲ್ಲಿನ ಅನ್ಯಾಯ ಸರಿಪಡಿಸಲು 10 ವರ್ಷಗಳಿಂದ ನಿರಂತರ ಹೋರಾಟ ನಡೆದಿದೆ. ಸರ್ಕಾರ ಈಗಲಾದರೂ ನೌಕರರ ಬೇಡಿಕೆಗೆ ಸ್ಪಂದಿಸಬೇಕು. 2006ರ ಏಪ್ರಿಲ್ 1ಕ್ಕೆ ಮೊದಲು ನೇಮಕಗೊಂಡು ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಅನುದಾನಪೂರ್ವ ಸೇವೆಯನ್ನು ಪಿಂಚಣಿ ಸೌಲಭ್ಯಕ್ಕೆ ಮಾತ್ರ ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ಒದಗಿಸಬೇಕು. 2006ರ ನಂತರ ನೇಮಕಗೊಂಡ ಅನುದಾನಿತ ನೌಕರರಿಗೆ ಸರ್ಕಾರಿ ನೌಕರರಂತೆ ವಂತಿಗೆ ಆಧರಿತ ನೂತನ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿದರು.

ಸರ್ಕಾರ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳದಿದ್ದರೆ ಜ. 4ರ ನಂತರ ಬೆಂಗಳೂರಿನ ಫ್ರೀಡಂ ಪಾಕ್೯ನಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು. ಸಂಘದ ಜಿಲ್ಲಾಧ್ಯಕ್ಷ ಅಂತಪ್ಪ ಬಿರಾದಾರ, ಉಪಾಧ್ಯಕ್ಷರಾದ ಪರಮೇಶ್ವರ ಬಿರಾದಾರ, ಸಲಾವುದ್ದೀನ್, ಗೋಪಿನಾಥ ಚವ್ಹಾಣ್, ಪ್ರಕಾಶ, ಪ್ರಮುಖರಾದ ಅನೀಲ ಮಂಗಲಗಿ, ಲಕ್ಷ್ಮಣ ಪೂಜಾರಿ, ಶಾಂತಕುಮಾರ ರಗಟೆ,ಪ್ರಕಾಶ ಗುಪ್ತಾ, ಪಾಂಡುರಂಗ ಮಾಸಿಮಾಡೆ, ಡಾ.ಚಂದ್ರಪ್ಪ ಭತಮುರ್ಗೆ, ರಮೇಶಕುಮಾರ ಪಾಟೀಲ್, ಗೋಪಾಲ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net