

ಯಳಂದೂರು: ಬಿಜೆಪಿ ಸರ್ಕಾರ ಹೋಗಿ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳ ಆವರಣದಲ್ಲಿ ಜಾಹೀರಾತು ಫಲಕಗಳನ್ನು ಬದಲಿಸಲಾಗಿದೆ. ಆದರೆ ಪಟ್ಟಣದಲ್ಲಿ ಮತದಾನ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಲು ಹಾಕಿರುವ ಫ್ಲೆಕ್ಸ್ ಮತ್ತು ಜಾಹೀರಾತು ಫಲಕಗಳು ಇನ್ನೂ ರಾರಾಜಿಸುತ್ತಿವೆ!
ತಾಲೂಕಿನ ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೆಇಬಿ, ಪಟ್ಟಣ ಪಂಚಾಯಿತಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ರಾಜಸ್ವ ನಿರೀಕ್ಷಕ ಕಚೇರಿ ಸೇರಿದಂತೆ ತಾಲೂಕಿನಲ್ಲಿ ಸುಮಾರು 30ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣೆ ದಿನಾಂಕ, ಮತದಾನ ಮಹತ್ವ ಕುರಿತು ದೊಡ್ಡದಾಗಿ ಫ್ಲೆಕ್ಸ್ ಹಾಕಿ ಪ್ರಚಾರ ಮಾಡಲಾಗಿದೆ. ಆದರೆ, ಚುನಾವಣೆ ಮುಗಿದಿದ್ದರೂ ಫ್ಲೆಕ್ಸ್ ಬದಲಾವಣೆ ಮಾಡಿಲ್ಲ
ಯೋಜನೆಗಳ ಫಲಕ ಹಾಕಿ: ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಉಚಿತ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವ ನಿಧಿ, ಅನ್ನಭಾಗ್ಯ ಯೋಜನೆಗಳ ಬಗ್ಗೆ ಮಾಹಿತಿ ಫಲಕಗಳನ್ನು ಹಾಕಬೇಕಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.