

ಮೈಸೂರು: ಹಳೇ ಉಂಡವಾಡಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಭೂಮಿ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಭೂ ಸ್ವಾಧೀನದಿಂದ ರೈತರಿಗೆ ಆಗಿರುವ ಅನ್ಯಾಯದ ಕುರಿತು ರೈತರು ಜಿಲ್ಲಾಧಿಕಾರಿ ಅವರ ಗಮನ ಸೆಳೆದರು. ಇಲವಾಲ ಹೋಬಳಿಯ ಹಳೇ ಉಂಡವಾಡಿ ಗ್ರಾಮದ ಬಳಿ ಕೆಆರ್‌ಎಸ್ ಜಲಾಶಯದಿಂದ ಮೈಸೂರು ನಗರ ಮತ್ತು 99 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಆನಂದೂರು, ಮೇಗಳಪುರ, ಮೈದನಹಳ್ಳಿ ಮತ್ತು ಚಿಕ್ಕನಹಳ್ಳಿ ಗ್ರಾಮದ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳ ಲಾಯಿತು. ಆದರೆ, ಭೂ ಪರಿಹಾರ ಕಡಿಮೆ ನಿಗದಿ ಪಡಿಸಲಾಗಿದ್ದು, ಪರಿಹಾರವನ್ನು ಪರಿಷ್ಕರಣೆ ಮಾಡಬೇಕು. ಅದೇ ರೀತಿ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಂಡು ನಂತರ ಕೈಬಿಟ್ಟ ಚಿಕ್ಕನಹಳ್ಳಿ ಗ್ರಾಮದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ರೈತರಿಗೆ ನ್ಯಾಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಭೂ ಸ್ವಾಧೀನಪಡಿಸಿಕೊಂಡು ನಂತರ ಕೈಬಿಟ್ಟಿರುವ ಚಿಕ್ಕನಹಳ್ಳಿ ಗ್ರಾಮದ ಸರ್ವೇ ನಂ.51ರ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹುಣಸೂರು ತಾಲೂಕಿನಲ್ಲಿ ಪವರ್ ಗ್ರಿಡ್ ಮತ್ತು ಕೆಪಿಟಿಸಿಎಲ್ ವಿದ್ಯುತ್ ಯೋಜನೆಗೆ ಭೂ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಬಡಗಲಪುರ ನಾಗೇಂದ್ರ ಮನವಿ ಮಾಡಿಕೊಂಡರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪವರ್‌ಗ್ರಿಡ್ ಮತ್ತು ಕೆಪಿಟಿಸಿಎಲ್‌ಗೆ ನೀಡಿರುವ ರೈತರ ಜಮೀನಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಹೊಸಕೋಟೆ ಬಸವರಾಜ್, ನೇತ್ರಾವತಿ, ನಾಗನಹಳ್ಳಿ ವಿಜಯೇಂದ್ರ, ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್, ಮರಕಂಯ್ಯ ಹಾಗೂ ಇತರರು ಇದ್ದರು.