ಹಳೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಿ

10chn5
ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಸಿ.ಎಸ್.ನಿರಂಜನ್‌ಕುಮಾರ್, ಆರ್.ನರೇಂದ್ರ, ಮಂಜೇಗೌಡ, ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು ಮತ್ತು ಇತರರು ಇದ್ದರು.
Published on

ಡೀನ್‌ಗೆ 6 ತಿಂಗಳು ರಜೆ ಮೇಲೆ ತೆರಳಿ ಎಂದ ಸಚಿವ

ಚಾಮರಾಜನಗರ: ನೂತನ ಜಿಲ್ಲಾಸ್ಪತ್ರೆ ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವುದರಿಂದ ಜನರಿಗೆ ತೊಂದರೆಯಾಗುತ್ತಿದ್ದು, ಹಾಗಾಗಿ ನಗರ ಕೇಂದ್ರದಲ್ಲೇ ಇರುವ ಹಳೇ ಆಸ್ಪತ್ರೆಯಲ್ಲೇ ಚಿಕಿತ್ಸೆ ಆರಂಭಿಸಲು ತಕ್ಷಣ ಕ್ರಮವಹಿಸಿ ಎಂದು ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದರು.


ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಳೆ ಹಾನಿಯಿಂದ ತೊಂದರೆಗಳಾದ ಪ್ರದೇಶಗಳಲ್ಲಿ ಕೈಗೊಂಡ ಹಾಗೂ ಕೈಗೊಳ್ಳಬೇಕಿರುವ ಪರಿಹಾರ ಕ್ರಮಗಳ ಕುರಿತಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಚಾಮರಾಜಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಡಾ.ಸಂಜೀವ್‌ಗೆ ನಿರ್ದೇಶನ ನೀಡಿದರು.


ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಶ್ವೇಶ್ವರಯ್ಯ ಸಚಿವರಿಗೆ ಮಾಹಿತಿ ನೀಡಿ, ಹಳೆಯ ಆಸ್ಪತ್ರೆಯಲ್ಲಿ ನಮ್ಮ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ ಪ್ರತ್ಯೇಕ ಆಸ್ಪತ್ರೆ ಕಾರ್ಯ ನಿರ್ವಹಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಂಜೀವ್ ಮಾತನಾಡಿ, ಇದಕ್ಕಾಗಿ ಸರ್ಕಾರದ ಹಂತದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬಹುದು. ಆದರೆ, ಇದರಿಂದ ಮೆಡಿಕಲ್ ಕಾಲೇಜು ಸ್ಥಾಪನೆ ನಿಯಮಾವಳಿಗೆ ತೊಡಕುಂಟಾಗಬಹುದು ಎಂದು ವಿವರಿಸಿದರು.

ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು.
ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು.


ಈ ವೇಳೆ ಗರಂ ಆದ ಸಚಿವರು, ಕಾನೂನು ಇರುವುದೇ ಜನರ ಕಷ್ಟಗಳನ್ನು ಬಗೆಹರಿಸಲು. ನಿಮ್ಮಿಂದ ಸಾಧ್ಯವಾಗದೆ ಇದ್ದರೆ 6 ತಿಂಗಳು ರಜೆ ಹಾಕಿ ಹೋಗಿ ಎಂದು ಹರಿಹಾಯ್ದರು. ಡೀನ್ ಮತ್ತೆ ವಿವರಿಸಲು ಹೋದಾಗ ಸಚಿವರು ಮಾತು ಮುಂದುವರಿಸಿ, ಹಳೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸುವ ಕೆಲಸ ತಕ್ಷಣ ಆಗಬೇಕು. ಜಿಲ್ಲೆಯ ಜನರ ಶ್ರೇಯೋಭಿವೃದ್ಧಿಗಾಗಿ ನಾವೆಲ್ಲ ಕೆಲಸ ಮಾಡೋಣ. ಹಳೇ ಆಸ್ಪತ್ರೆಯಲ್ಲಿ ಹಿಂದೆ ಜನರು ಗಿಜಿಗುಡುತ್ತಿದ್ದರು, ಹಾಗೆ ಮತ್ತೆ ಕಾಣಬೇಕು. ಮೆಡಿಕಲ್ ಕಾಲೇಜಿಗೆ ಏನು ಬೇಕೋ ಅದನ್ನೂ ಮಾಡೋಣ ಎಂದರು.


ನಿಮ್ಮ ಆಸ್ಪತ್ರೆಯಲ್ಲಿ ಇರುವ ಒಟ್ಟು ವೈದ್ಯರು, ಸಿಬ್ಬಂದಿ ಮಾಹಿತಿಯನ್ನು ನನಗೆ ಕೊಡಿ. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಈ ಬಗ್ಗೆ ಕ್ರಮ ವಹಸಿಬೇಕು ಎಂದು ಸೂಚನೆ ನೀಡಿದರು. ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಶಾಸಕರ ಪರವಾಗಿ ಹಳೇ ಆಸ್ಪತ್ರೆ ಆರಂಭಿಸಲು ಬೆಂಬಲ ೋಷಿಸಿದರು.


ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿ ದೇವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net