

ಚಿತ್ರದುರ್ಗ: ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ಕಲಿಕಾ ಭಾಗ್ಯದ ಮೊದಲಿನ ಯೋಜನೆಯನ್ನೇ ಮುಂದುವರಿಸ ಬೇಕೆಂಬುದು ಸೇರಿ ದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಮಿ ಕರು ಮಂಗಳವಾರ ನಗರದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟಿಸಿದರು.
ಶೇ.75ರಷ್ಟು ಕಡಿತಗೊಳಿಸುವ ಮೂಲಕ ಈ ಕಲಿಕಾಭಾಗ್ಯ ಯೋಜನೆ ದುರ್ಬಲಗೊಳಿಸಲಾಗಿದೆ. ಇದರಿಂದಾಗಿ ಸಾವಿರಾರು ಕಾರ್ಮಿ ಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತವಾಗುವಂತಾಗುತ್ತಿದ್ದಾರೆ. ಯೋಜನೆಗೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹಣವಿಲ್ಲ ಎಂಬ ಸರ್ಕಾರ ಸಬೂಬು ಹೇಳುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ಹೊರ ಹಾಕಿದರು.
ಸಿಎಂ ಪರಿಷ್ಕೃತ ಶೈಕ್ಷಣಿಕ ಧನ ಸಹಾಯ ಯೋಜನೆ ಉದ್ಘಾಟಿಸಿದರೂ ಕೂಡ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಿನ ಮೊತ್ತದ ಪಾವತಿ ಬಾಕಿ ಇದೆ. ಈ ಬಾಕಿ ಬಿಡುಗಡೆಯೊಂದಿಗೆ ಹಿಂದೆ ಕೊಡುತ್ತಿದ್ದ ಧನಸಹಾಯವನ್ನೇ ಮುಂದುವರಿಸಬೇಕೆಂದು ಆಗ್ರಹಿಸಿದರು.
ನಕಲಿ ಕಾರ್ಡ್‌ಗಳ ವಿರುದ್ಧ ಕ್ರಮ ಜರುಗಿಸಬೇಕು. ಕೇಂದ್ರ ಸರ್ಕಾರದ ನಿರ್ದೇಶನ ಉಲ್ಲಂಘಿಸಿ ಹಿಂದಿನ ಬಿಜೆಪಿ ಸರ್ಕಾರದ ಅವಧಿ, ಸಾವಿರಾರು ಕೋಟಿ ರೂ.ವೆಚ್ಚದಲ್ಲಿ ಮನಸೋ ಇಚ್ಛೆ ಖರೀದಿಗಳಾಗಿವೆ ಎಂದು ದೂರಿದರು.
ಮದುವೆ,ಪಿಂಚಣಿ,ಹೆರಿಗೆ,ವೈದ್ಯಕೀಯ ಧನಸಹಾಯದ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು. ಸಿಜಿಎಚ್ ಆಧಾರಿತ ವೈದ್ಯಕೀಯ ಮರುಪಾವತಿ ಯೋಜನೆ ರದ್ದುಗೊಳಿಸಿ ಎಲ್ಲ ನೋಂದಾಯಿತ ಕಾರ್ಮಿಕರಿಗೆ ಹಾಗೂ ಕುಟುಂಬ ಸದಸ್ಯರಿಗೆ‘ಆರೋಗ್ಯ ಸಂಜೀವಿನಿ’ ನಗದು ರಹಿತ ಸೇವೆ ಜಾರಿಗೊಳಿಸಬೇಕು.
ಪಿಂಚಣಿ ವಯೋಮಿತಿ ಹೆಚ್ಚಳ,ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಾಲ ಹಾಗೂ ಸಹಾಯಧನ, ಸೇವಾಸಿಂಧು ತಂತ್ರಾಂಶದ ಬದಲು ಕಾರ್ಮಿಕ ಇಲಾಖೆ ಪ್ರತ್ಯೇಕ ತಂತ್ರಾಂಶದಡಿ ಜಾರಿಯಾಗಿರುವ ನೋಂದಣಿ,ನವೀಕರಣ ಕೆಲಸ ಸಮರ್ಪಕಗೊಳಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸಮಿತಿ ಪ್ರಧಾನ ಕಾರ‌್ಯದರ್ಶಿ ಸಿ.ಕೆ.ಗೌಸ್‌ಪೀರ್,ಸಣ್ಣಮ್ಮ,ದ್ರಾಕ್ಷಾಯಣಮ್ಮ,ರಶೀದ್,ಉಮಾಪತಿ,ದಾದಾಪೀರ್,ಪ್ಯಾರೇಜಾನ್ ಟಿ.ರಾಘವೇಂದ್ರ,ಮಲ್ಲಿಕಾರ್ಜುನ್,ನಾಗಮ್ಮ,ಪಾಪಮ್ಮ, ಅಬ್ದುಲ್ಲಎಂ.ಕೆ.ಹಟ್ಟಿ,ಚಂದ್ರಮ್ಮ,ರವಿಮೂರ್ತಿ,ನಾಗರಾಜ್,ಕಂಪಳಪ್ಪ,ಗಿರಿಜ ಮ್ಮ,ಧರ್ಮರಾವ್, ಮಂಜುನಾಥ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.