

ಹಾಸನ: ತಾಲೂಕಿನ ಗಾಡೇನಹಳ್ಳಿಯ ಸಂತ ಇಗ್ನೇಷಿಯಸ್ ಹಿರಿಯ ಪ್ರಾಥಮಿಕ ಪಾಠಶಾಲೆ ಮತ್ತು ಲೊಯೊಲಾ ಪ್ರೌಢಶಾಲೆಯ 1997-1998ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಇತ್ತೀಚೆಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ರೀಟಾ, ಪ್ರೌಢಶಾಲಾ ಮುಖ್ಯೋಪಾಧ್ಯಯರಾದ ಶಾಲಿನಿ, ನಿವೃತ್ತ ಶಿಕ್ಷಕರಾದ ವಿಜೇಂದ್ರರಾವ್, ಜೋಸೆಫ್, ನಟೇಶ್, ರೇಣುಕಾ ಹಾಗೂ ಲೋರೆನ್ಸ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲರೂ ತಮ್ಮ ನೆಚ್ಚಿನ ಗುರುಗಳಿಗೆ ವಂದಿಸಿ ಆಶೀರ್ವಾದ ಪಡೆದರು.
ಬಳಿಕ ಮಾತನಾಡಿದ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶಾಲಿನಿ ಅವರು, ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.
ಇದೆ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆ, ತಮಗೆ ವಿದ್ಯೆ ನೀಡಿದ ಗುರುಗಳು ಅಂದಿನ ಸಂದರ್ಭದಲ್ಲಿನ ಗುರು-ಶಿಷ್ಯರ ಸಂಬಂಧಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ 1997-98 ನೇ ಸಾಲಿನ 10ನೇ ತರಗತಿಯ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.