

ಮೈಸೂರು: ನೂತನ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ರದ್ದುಪಡಿಸಬೇಕು ಎಂದು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ ಸೇರಿದಂತೆ ವಿವಿಧ ಮಾರ್ಗದಲ್ಲಿ ಸಾಗಿ ಜನದರ್ಶಿನಿ ಅತಿಥಿಗೃಹದಲ್ಲಿರುವ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
2006ರಿಂದ ರಾಜ್ಯ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಎನ್‌ಪಿಎಸ್ ಜಾರಿಗೆ ತಂದಿದ್ದು, ಇದು ನೌಕರರ ಸಂಧ್ಯಾಕಾಲದ ಬದುಕಿನ ಮರಣ ಶಾಸನವಾಗಿದೆ. ಕಳೆದ 16 ವರ್ಷಗಳಲ್ಲಿ ನಿವೃತ್ತರಾದ ನೌಕರರಿಗೆ 900, 1000, 1200, 2000 ರೂ. ಪಿಂಚಣಿ ದೊರೆಯುತ್ತಿದೆ. ಈ ಯೋಜನೆಯಡಿ ನೇಮಕಗೊಂಡು ಮರಣ ಹೊಂದಿದ ನೌಕರಿಗೆ ಸೂಕ್ತ ಕುಟುಂಬ ಪಿಂಚಣಿ, ಆರ್ಥಿಕ ಭದ್ರತೆ ದೊರೆಯುತ್ತಿಲ್ಲ. ಇದರಿಂದಾಗಿ ಅವರ ಕುಟುಂಬಗಳು ಕಷ್ಟಕ್ಕೆ ಸಿಲುಕಿವೆ. ಈ ಯೋಜನೆಯು ನೌಕರರ ಸಂಧ್ಯಾಕಾಲದ ಬದುಕನ್ನು ಮಾನಸಿಕ ಯಾತನೆಗೆ ತಳ್ಳುತ್ತಿದೆ. ಆದ್ದರಿಂದ ಈ ಯೋಜನೆಯನ್ನು ರದ್ದುಪಡಿಸಬೇಕು. ಇದರ ಬದಲಿಗೆ ಹಳೆಯ ಪಿಂಚಣಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸಂಘದ ಅಧ್ಯಕ್ಷ ಶಾಂತರಾಮ್ ಸೇರಿದಂತೆ ಇನ್ನಿತರರು ಇದ್ದರು.