

ಗಜೇಂದ್ರಗಡ: ತಾಲೂಕಿನಲ್ಲಿ ಬಿತ್ತನೆ ಮಾಡಿದ ಮುಂಗಾರು ಹಂಗಾಮಿನ ಹೆಸರು ಬೆಳೆಗೆ ಸಂಪೂರ್ಣ ಹಳದಿ ರೋಗ (ಎಲೊ್ಲೕವೇನ್ ಮೊಜಾಯಿಕ್) ಕಾಣಿಸಿಕೊಂಡಿದೆ. ಇದು ಸಾವಿರಾರು ರೈತರನ್ನು ಚಿಂತೆಗೀಡು ಮಾಡಿದೆ.
ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ತಂದುಕೊಡುವ ಬೆಳೆ ಇದಾಗಿರುವುದರಿಂದ ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೀಜ ಬಿತ್ತನೆ ಮಾಡಿದ್ದಾರೆ. ಗಜೇಂದ್ರಗಡ ಭಾಗದ ಮಸಾರಿ (ಕೆಂಪು) ಭೂ ಪ್ರದೇಶದಲ್ಲಿ ಅಂದಾಜು 3,500 ಹೆಕ್ಟೇರ್ನಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಹಲುಸಾಗಿ ಬೆಳೆದಿರುವ ಸಸಿಗಳಿಗೆ ಹಳದಿ ರೋಗ ಒಕ್ಕರಿಸಿ ಎಲೆಗಳು ಮುದುರಿವೆ. ಎರಡು ಅಡಿ ಎತ್ತರಕ್ಕೆ ಬೆಳೆದಿರುವ ಹೆಸರಿಗೆ ಜಿಗಿ ಹುಳು, ಹೇನು, ನಂಜು ರೋಗ ಹಾಗೂ ಬೂದಿ ರೋಗ ತಗುಲಿದೆ. ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಅನ್ನದಾತನ ಕನಸು ಕಮರುತ್ತಿದೆ.
ಗಜೇಂದ್ರಗಡ, ಉಣಚಗೇರಿ, ಗೌಡಗೇರಿ, ಗೋಗೇರಿ, ವಿರಾಪೂರ, ರಾಂಪೂರ, ಹೊಸರಾಂಪೂರ, ಮಾಟರಂಗಿ, ಕುಂಟೋಜಿ, ಜಿಗೇರಿ, ವದೇಗೊಳ ಭಾಗದ ಸಾವಿರಾರು ರೈತರ ಹೊಲದಲ್ಲಿ ಹೆಸರು ಬೆಳೆ ಹಳದಿ ಬಣಕ್ಕೆ ತಿರುಗಿರುವುದು ಕಂಡುಬರುತ್ತಿದೆ.
ವಾಡಿಕೆಗಿಂತ ಮೊದಲೇ ಬಿತ್ತನೆ: ಹೆಸರನ್ನು ಸಾಮಾನ್ಯವಾಗಿ ಎರೆ ಭೂಮಿಯಲ್ಲಿ ಬಿತ್ತುವ ವಾಡಿಕೆ ಇತ್ತು. ಮುಂಗಾರು ಆರಂಭಕ್ಕೂ ಮೊದಲು ಸುರಿವ ಮಳೆಗೆ ಮಸಾರಿ ಭೂಮಿಯಲ್ಲಿ ಹೆಸರು ಬೀಜ ಬಿತ್ತನೆ ಮಾಡುವ ಪರಿಪಾಠವನ್ನು ಕೆಲ ವರ್ಷದಿಂದ ರೈತರು ಬೆಳೆಸಿಕೊಂಡಿದ್ದಾರೆ. ಇದರಲ್ಲಿ ಯಶಸ್ಸು ಕೂಡ
ಕಂಡಿದ್ದರು. ಹೆಸರು ಬೆಳೆಯ ಅವಧಿ ಮೂರು ತಿಂಗಳು. ನಂತರ ಸಜ್ಜೆ, ಸೂರ್ಯಕಾಂತಿ ಅಥವಾ ಹುರಳಿ ಬಿತ್ತನೆ ಮಾಡಿ ಮಸಾರಿ ಭೂಮಿಯಲ್ಲಿಯೇ 2 ಬೆಳೆಯನ್ನು ತೆಗೆಯಬಹುದು ಎಂಬ ಲೆಕ್ಕಾಚಾರ ರೈತರದ್ದು. ಹೀಗಾಗಿ, ವಾಡಿಕೆಗಿಂತ ಮೊದಲೇ ಹೆಸರು ಬಿತ್ತನೆ ಮಾಡಲಾಗಿದೆ. ಎರೆ ಭೂಮಿ ಹಾಗೂ ಮಸಾರಿ ಭೂ ಪ್ರದೇಶಕ್ಕೆ ಹೊಲಿಕೆ ಮಾಡಿದರೆ ಮಸಾರಿ ಪ್ರದೇಶದಲ್ಲೇ ಹೆಚ್ಚಾಗಿ ರೋಗ ಕಾಣಿಸಿಕೊಂಡಿದೆ.
ಸೂಕ್ತ ಪರಿಹಾರಕ್ಕೆ ಒತ್ತಾಯ: ಹಳದಿ ರೋಗದ ವೈರಸ್ಗಳು ಗಾಳಿಯೊಂದಿಗೆ ಹಾರುತ್ತ ಕೆಲವೇ ದಿನಗಳಲ್ಲಿ ಅಕ್ಕಪಕ್ಕದ ಹೊಲಗಳಿಗೂ ವ್ಯಾಪಿಸುತ್ತವೆ. ಅಲ್ಲದೆ, ಈ ರೋಗಕ್ಕೆ ಪ್ರಮುಖ ಕಾರಣ ಉಷ್ಣತೆಯಲ್ಲಿನ ಏರುಪೇರು. 1 ಎಕರೆಗೆ ಬೀಜ, ಗೊಬ್ಬರ ಸೇರಿ 7 ರಿಂದ 8 ಸಾವಿರ ರೂ.ಖರ್ಚು ಬರುತ್ತದೆ. ಇಲ್ಲಿನ ರೈತರ ಸಮಸ್ಯೆ ಕುರಿತು ಕೃಷಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಒಮ್ಮೆಯೂ ಭೇಟಿ ನೀಡಿಲ್ಲ. ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಪ್ರಕೃತಿ ವಿಕೋಪದಿಂದ ಕೈಕೊಟ್ಟಿರುವ ಬೆಳೆಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಹೆಸರು ಬೆಳೆಗೆ ವಕ್ಕರಿಸಿದ ವೈರಸ್ ಮತ್ತು ಹೇನು ಹತೋಟಿಗೆ ರೈತರು ತಕ್ಷಣ ಮುಂದಾಗಬೇಕು. ಪ್ರಾರಂಭದಲ್ಲಿ ರೋಗಪೀಡಿತ ಗಿಡಗಳನ್ನು ಕಿತ್ತು ದೂರದಲ್ಲಿ ಹೂಳಬೇಕು ಅಥವಾ ಸುಡಬೇಕು. ರೋಗ, ಕೀಟ ನಿಯಂತ್ರಣಕ್ಕೆ ತಜ್ಞರ ಸಲಹೆಯಂತೆ ನಿರ್ದಿಷ್ಟ ಪಡಿಸಿದ ಪ್ರಮಾಣದಲ್ಲಿ ರಾಸಾಯನಿಕ ಸಿಂಪಡಿಸುವುದು ಅವಶ್ಯ.| ರುದ್ರಗೌಡ ಪಾಟೀಲ ,ಸಹಾಯಕ ಕೃಷಿ ನಿರ್ದೇಶಕರು ರೋಣ