

ಗುಂಡ್ಲುಪೇಟೆ: ಗುಂಪಿನಿಂದ ಹಲ್ಲೆಗೊಳಗಾಗಿದ್ದ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಕುರಿತು ಮೃತನ ತಂದೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ಮನೋಜ್ ಕುಮಾರ್(26) ಸಾವಿಗೀಡಾದ ಯುವಕ. ಮೇ 16ರಂದು ಪಟ್ಟಣದಿಂದ ಮನೋಜ್ ತನ್ನ ತಾಯಿ ಸರೋಜಾರೊಂದಿಗೆ ಆಟೋದಲ್ಲಿ ಸ್ವಗ್ರಾಮಕ್ಕೆ ಬರುತ್ತಿದ್ದಾಗ ದಾರಿಯಲ್ಲಿ ಪಟ್ಟಣದ ಕುರುಬಗೇರಿ ಸರ್ಕಾರಿ ಶಾಲೆಯ ಶಿಕ್ಷಕಿ ಗೀತಾ, ಅವರ ಪತಿ ಕೃಪಾಶಂಕರ ಹಾಗೂ ಪುತ್ರ ಮತ್ತು ಮೂವರು ಸ್ನೇಹಿತರು ಆಟೋವನ್ನು ಅಡ್ಡಗಟ್ಟಿ ಜಾತಿ ನಿಂದನೆ ಮಾಡಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಸರೋಜಾಳ ಕತ್ತಿನಲ್ಲಿದ್ದ ಚಿನ್ನದ ಚೈನ್ ಕಿತ್ತುಕೊಂಡಿದ್ದಾರೆ. ಈ ಬಗ್ಗೆ ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಹೊರಟು ಹೋಗಿದ್ದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮನೋಜನಿಗೆ ಚಿಕಿತ್ಸೆ ನೀಡಿ ಮೈಸೂರಿನ ಆಸ್ಪತ್ರೆಗೆ ಕರೆತಂದಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವಿಗೀಡಾಗಿದ್ದಾನೆ ಎಂದು ಮೃತನ ತಂದೆ ಸ್ವಾಮಿ ನೀಡಿದ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿದ್ದಾರೆ. ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ವಾರಸುದಾರರ ವಶಕ್ಕೆ ನೀಡಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.