

ಕಲಬುರಗಿ: ಸೇಡಂ ತಾಲೂಕಿನ ಊಡಗಿ ಗ್ರಾಮದಲ್ಲಿ ಕೆಲವು ರೌಡಿಗಳು ಪುಂಡಾಟ ಮೆರೆದು, ಅಲ್ಪಸಂಖ್ಯಾತರ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್ ರಕ್ಷಣೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್ ಆರೋಪಿಸಿದರು.
ಫೆ.೨೩ರಂದು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ತಲವಾರ್‌ಗಳಿಂದ ಹಲ್ಲೆ ಮಾಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಪ್ರಸ್ತುತ ಹಲ್ಲೆಗೊಳಗಾದವರ ಆಟೋಗಳ ಟಾಪ್ ಹರಿದು, ಗ್ಲಾಸ್ ಒಡೆಯಲಾಗಿತ್ತು. ಜಗಳ ಆಗುತ್ತದೆ ಎಂದು ಮುಂಜಾಗೃತ ಕ್ರಮವಾಗಿ ರಕ್ಷಣೆ ನೀಡಲು ಪೊಲೀಸರಿಗೆ ಮನವಿ ಮಾಡಲಾಗಿತ್ತು. ಕ್ರಮ ಕೈಗೊಳ್ಳದಕ್ಕೆ ಈ ಪರಿಸ್ಥಿತಿ ಎದುರಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವತಃ ಸಚಿವರ ಸ್ವಗ್ರಾಮದಲ್ಲಿಯೇ ಹೀಗೆ ಆಗಿದೆ. ಹಲ್ಲೆಗೈದವರ ಬೆಂಬಲಕ್ಕೆ ಸಚಿವರ ಸಹೋದರ ಬಸವರಾಜ ಪಾಟೀಲ್ ಊಡಗಿ ಇದ್ದಾರೆ. ರೌಡಿಶೀಟರ್ ಮಲ್ಲು ಎಂಬಾತನ ಸಹೋದರ ಕಾಂಗ್ರೆಸ್ ಬೆಂಬಲಿತನಾಗಿ ಗ್ರಾಪಂ ಸದಸ್ಯನಾಗಿದ್ದಾನೆ. ಊಡಗಿ ಗ್ರಾಮದಲ್ಲಿ ಚುನಾವಣೆ ಸಂದರ್ಭದಲ್ಲೂ ಈ ರೀತಿಯ ಹಲ್ಲೆಗಳು ನಡೆದಿವೆ ಎಂದು ಆರೋಪಿಸಿದರು. ಒತ್ತಡ ಹೇರಿದ ನಂತರ ಎಂಟತ್ತು ಜನರನ್ನು ಬಂಧಿಸಿದ್ದು, ಕೂಡಲೇ ಎಲ್ಲರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ದೇವೇಗೌಡ ತೆಲ್ಲೂರ, ಇಮ್ರಾನ್‌ಖಾನ್ ಮುಕ್ರಂಖಾನ್, ವಿಶಾಲ ನವರಂಗ ಇತರರಿದ್ದರು.