ಹಲ್ಲೆ ಮಾಡಿದವರನ್ನು ಬಂಧಿಸಿ

kdr dss
Published on

ಕಡೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಚಿಂತಾಮಣಿ ತಾಲೂಕಿನ ಕೋಡಿಗಲ್ ಗ್ರಾಮದ ರಮೇಶ್ ಮತ್ತು ಅವರ ಕುಟುಂಬದ ಮೇಲೆ ಹಲ್ಲೆ ಮಾಡಿರುವವರನ್ನು ಪೊಲೀಸರು ಬಂಧಿಸಬೇಕು ಎಂದು ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕದಸಂಸ ತಾಲೂಕು ಸಂಘಟನಾ ಸಂಚಾಲಕ ಕಡೂರು ಕೃಷ್ಣಪ್ಪ ಒತ್ತಾಯಿಸಿದರು.

ರಮೇಶ್ ಅವರು ಸಂಘಟನೆಯಲ್ಲಿ ಉತ್ತುಂಗ ಸ್ಥಾನದಲ್ಲಿರುವುದನ್ನು ಸಹಿಸದೆ ನಿವೃತ್ತ ಡಿವೈಎಸ್‌ಪಿ ಕೋನಪ್ಪ ರೆಡ್ಡಿ ಮುಂದಾಳತ್ವದಲ್ಲಿ ಸುಬ್ಬಾರೆಡ್ಡಿ, ಚಂದ್ರಪ್ಪ, ವೆಂಕಟರಮಣ ಗೋಪಾಲ, ರಂಗನಾಥ್ ರೆಡ್ಡಿ, ಭಾಸ್ಕರ್ ರೆಡ್ಡಿ ಅವರು ಕೋಡಿಗಲ್ ರಮೇಶ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ಹಿಂದೆ ಕೋಡಿಗಲ್ ರಮೇಶ್ ಅವರಿಗೆ ಜೀವ ಬೆದರಿಕೆಯಿಂದ ಗನ್‌ಮ್ಯಾನ್ ನೀಡಲಾಗಿತ್ತು. ಸರ್ಕಾರ ಗನ್‌ಮ್ಯಾನ್ ಅನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ 8 ಜನರ ಗುಂಪು ರಮೇಶ್ ಮೇಲೆ ಹಲ್ಲೆಮಾಡಿ ಅವರ ಕುಟುಂಬದವರನ್ನು ನಿಂದಿಸಿದ್ದಾರೆ. ರಮೇಶ್ ಅವರು ಪೊಲೀಸ್ ಠಾಣೆಗೆ ದೂರು ನೀಡಿ ಜಾತಿ ನಿಂದನೆ ಕೇಸ್ ದಾಖಲಿಸಲು ಮನವಿ ಮಾಡಿದ್ದು, ಚಿಂತಾಮಣಿ ಡಿವೈಎಸ್‌ಪಿ ಮುರಳಿ ಅವರು ಕೇಸ್ ಹಾಕಿದ್ದರೂ 8 ಜನರನ್ನು ಬಂಧಿಸಿಲ್ಲ. ಕೂಡಲೇ ಮುರುಳಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಸುನೀತಾ ರಾಜ್ ಮಾತನಾಡಿ, ರಾಜ್ಯದಲ್ಲಿ ದಲಿತ ಹೋರಾಟಗಾರರ ವಿರುದ್ಧ ಸುಳ್ಳು ಆರೋಪ ಮಾಡಿ ಕೊಲೆ ಬೆದರಿಕೆ ಹಾಕುತ್ತಿರುವ ಘಟನೆಗಳು ನಡೆಯುತ್ತಿವೆ. ದಲಿತರಿಗೆ ಸರ್ಕಾರ ರಕ್ಷಣೆ ನೀಡಬೇಕು ಎಂದರು.

ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ರಂಗಸ್ವಾಮಿ, ಬಿ.ಎನ್.ಪ್ರತಾಪ್, ಶಿವಮೊಗ್ಗದ ಲತಾ, ಧರ್ಮ, ವಾಸು, ಮುನ್ನಾ, ಹೊನ್ನಪ್ಪ, ಪ್ರಭಾಕರ್, ಗಿರೀಶ್, ಮೈಲಾರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net