

ಬೆಳಗಾವಿ: ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಗೋರಕ್ಷಕರ ಮೇಲೆ ನಡೆದ ಹಲ್ಲೆ ಖಂಡಿಸಿ ಸಾವಿರಾರು ಶ್ರೀರಾಮಸೇನೆ ಕಾರ್ಯಕರ್ತರು ಬೆಳಗಾವಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗುರುವಾರ ಪ್ರತಿಭಟನಾ ರ‌್ಯಾಲಿ ನಡೆಸಿದರು. ಇಂಗಳಿ ಚಲೋ ರ‌್ಯಾಲಿ ಕೈಗೊಂಡಿದ್ದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಮಾತಿನ ಚಕಮಕಿ ಉಂಟಾಗಿ, ಪ್ರಮೋದ ಮುತಾಲಿಕ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಇದಕ್ಕೂ ಮೊದಲು ಮಾತನಾಡಿದ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ, ಗೋವು ಸಮಾಜಕ್ಕೆ ಹಲವು ಕೊಡುಗೆ ನೀಡುತ್ತದೆ. ಗೋಹತ್ಯೆ ಮಾಡುವುದು ಸರಿಯಲ್ಲ. ಗೋವಿನ ಶಾಪ ಅತಿಕೆಟ್ಟದು, ಗೋರಕ್ಷಕರ ಮೇಲೆ ಹಲ್ಲೆ ಮಾಡಿದ ಪ್ರಕರಣ ವಾಪಸ್ ಪಡೆದರೆ, ಜನರು ಕಾಂಗ್ರೆಸ್ ನಾಯಕರನ್ನು ಅದೇ ಮರಕ್ಕೆ ಕಟ್ಟಿ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ವೋಟಿಗಾಗಿ ಇವರನ್ನು ಬಚಾವ್ ಮಾಡಿದರೆ, ಸರ್ಕಾರಕ್ಕೇ ತಿರುಗು ಬಾಣವಾಗುತ್ತದೆ. ಇಂಗಳಿ ಘಟನೆ ವೈರಸ್ ಮಾದರಿಯಲ್ಲಿ ಹರಡುವ ಮೊದಲು ಸರ್ಕಾರ ಎಚ್ಚರ ವಹಿಸಬೇಕು. ಸಾಂಕೇತಿಕವಾಗಿ ಇಂಗಳಿಗೆ ಹೋಗಲು ಸಿದ್ಧರಾಗಿದ್ದೇವೆ ಎಂದರು.
ಇಂಗಳಿಯಲ್ಲಿ ಗೋರಕ್ಷಕರ ಮೇಲೆ ಹಲ್ಲೆ ನಡೆಸಿದ ಎಲ್ಲರನ್ನು ಬಂಧಿಸಲೇಬೇಕು. ಸೌಹಾರ್ದತೆಯ ಮಾತು ಹೇಳುವವರೂ ಹಲ್ಲೆ ನಡೆದಾಗ ಎಲ್ಲಿದ್ದರು? ಈ ಎಂದು ಪ್ರಶ್ನಿಸಿದರು.
ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿದರು, ಶ್ರೀರಾಮಸೇನಾ ಪ್ರಮುಖ ರವಿಕುಮಾರ್ ಕೋಕಿತಕರ ಮಾತನಾಡಿ, ಹುಕ್ಕೇರಿ ತಾಲೂಕಿನ ಇಂಗಳಿಯಲ್ಲಿ ಗೋರಕ್ಷಕರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಹಲ್ಲೆ ಮಾಡಿದ ಎಲ್ಲರನ್ನು ಬಂಧಿಸಬೇಕು ಎಂದು
ಆಗ್ರಹಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಶ್ರೀರಾಮಸೇನೆ ಕಾರ್ಯಕರ್ತರು ಇದ್ದರು.