

ಹಾಸನ: ತಾಲ್ಲೂಕಿನ ಯಡಿಯೂರು ಗ್ರಾಮದ ಅನಿತಾ (27) ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪೋಷಕರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ
ಕಳೆದ ಎಂಟು ವರ್ಷದ ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿ ಮೂರೇಹಳ್ಳಿ ಗ್ರಾಮದ ಅನಿತಾಳನ್ನು ಯಡಿಯೂರು ಗ್ರಾಮದ ಯೋಗೇಶ್‌ಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು ಹಿರಿಯ ಮಗ ಅನಾರೋಗ್ಯದಿಂದ ಸಾವನ್ನಪ್ಪಿದ್ದ. ವರದಕ್ಷಿಣೆ ತರುವಂತೆ ಆಗಾಗ್ಗೆ ಪತ್ನಿ ಅನಿತಾಗೆ ಯೋಗೇಶ್ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಹಲವು ಬಾರಿ ರಾಜಿ ಸಂಧಾನ ಮಾಡಲಾಗಿತ್ತು. ಎರಡು ಬಾರಿ ಪೊಲೀಸ್ ಠಾಣೆಗೂ ದೂರು ನೀಡಿದ್ದರು ಯೋಗೇಶ್ ತನ್ನ ಬುದ್ಧಿ ಬಿಟ್ಟಿರಲಿಲ್ಲ. ಮದುವೆಯಾದಗಿನಿಂದ ಅನಿತಾ ತವರು ಮನೆಯಲ್ಲೇ ಹೆಚ್ಚು ಇದ್ದರು ಎನ್ನಲಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಪತಿ ಜಗಳವಾಡಿ ಹಲ್ಲೇ ಮಾಡಿದ್ದರಿಂದ ಅನಿತಾ ತವರು ಮನೆ ಸೇರಿದ್ದಳು. ಮತ್ತೆ ರಾಜಿ ಸಂಧಾನ ಮಾಡಿ ಪತಿ ಯೋಗೇಶ್ ಅನಿತಾಳನ್ನು ಮನೆಗೆ ಕರೆದುಕೊಂಡು ಹೋಗಿದ್ದನು. ಬಧುವಾರ ರಾತ್ರಿ ಅನಿತಾ ತನ್ನ ಪೋಷಕರಿಗೆ ಕರೆ ಮಾಡಿ ಪತಿ ಹಲ್ಲೆ ಮಾಡುತ್ತಿದ್ದಾನೆ ಬನ್ನಿ ಎಂದಿದ್ದಾಳೆ. ಪೋಷಕರು ಯಡಿಯೂರಿಗೆ ಬರುವಷ್ಟರಲ್ಲಿ ಅನಿತಾ ಕೊನೆಯುಸಿರೆಳೆದಿದ್ದಾರೆ. ನಂತರ ಆಕೆಯ ಶವವನ್ನು ತಂದು ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿದೆ ಆದರೆ ಪತಿ ಯೋಗೇಶ್ ಪರಾರಿಯಾಗಿದ್ದಾನೆ.
ಅನಿತಾ ಪೋಷಕರು ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಮೃತ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಯಿತು.