

ಭದ್ರಾವತಿ: ಮನುಷ್ಯನಿಗೆ ಬಾಯಿ ಹಾಗೂ ಹಲ್ಲಿನ ಸಮಸ್ಯೆಗಳು ಕಾಣಿಸಿಕೊಂಡಾಗ ತ್ವರಿತವಾಗಿ ಚಿಕಿತ್ಸೆ ಪಡೆದು ಆರಂಭದಲ್ಲೇ ನಿವಾರಿಸಿಕೊಳ್ಳಬೇಕು. ಇಲ್ಲದಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ದುಬಾರಿ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ದಂತ ವೈದ್ಯೆ ಎಚ್.ವಿ.ಶಿಲ್ಪಾ ಹೇಳಿದರು.
ಸಿದ್ದಾರೂಢ ನಗರದಲ್ಲಿರುವ ಧರ್ಮಶ್ರೀ ಸಭಾ ಭವನದಲ್ಲಿ ವಿಶ್ವ ಹಿಂದು ಪರಿಷತ್‌ನಿಂದ ಏರ್ಪಡಿಸಿದ್ದ ದಂತ ಉಚಿತ ತಪಾಸಣಾ ಶಿಬಿರ ಹಾಗೂ ಜನ ಜಾಗೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗಾಗಿಯೇ ಇರುವ ವಿಶೇಷ ಟೂತ್ ಪೇಸ್ಟನ್ನು ಉಪಯೋಗಿಸಬೇಕು. ದೊಡ್ಡವರು ಉಪಯೋಗಿಸುವ ಪೇಸ್ಟ್‌ನಿಂದ ಹಲ್ಲನ್ನು ಸ್ವಚ್ಛಗೊಳಿಸಿದರೆ ಅವರು ದೊಡ್ಡವರಾದಾಗ ಹಲ್ಲಿನ ಸಮಸ್ಯೆಗಳು ಹೆಚ್ಚಾಗುತ್ತದೆ. ಸಣ್ಣ ಮಕ್ಕಳಲ್ಲಿ ಹುಳುಕು ಹಲ್ಲುಗಳಿದ್ದಾಗ ಅದರ ಬಗ್ಗೆ ಗಮನ ನೀಡದೆ ಅವುಗಳು ನಂತರದ ದಿನಗಳಲ್ಲಿ ಬಿದ್ದು ಹೋಗುತ್ತದೆ ಎಂಬ ಭಾವನೆ ಸರಿಯಲ್ಲ. ಅದರ ಬಗ್ಗೆ ಗಮನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಅದರಿಂದ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
ಇಂದಿನ ದಿನಗಳಲ್ಲಿ ಗುಟ್ಖಾ, ಪಾನ್ ಮಸಾಲ, ತಂಬಾಕು, ಹೊಗೆಸೊಪ್ಪು ಇತ್ಯಾದಿ ಪದಾರ್ಥಗಳ ಸೇವನೆ ಹೆಚ್ಚುತ್ತಿದೆ. ಅದರಲ್ಲೂ ಕೂಲಿ ಕಾರ್ಮಿಕರು, ವಾಹನಗಳ ಚಾಲಕರು, ವಿದ್ಯಾರ್ಥಿಗಳು ಕ್ಷಣಿಕ ಆನಂದಕ್ಕಾಗಿ, ಸ್ಥಿತಿವಂತರು ಶೋಕಿಗೆ ಪ್ರಾರಂಭ ಮಾಡಿ ನಂತರದ ದಿನಗಳಲ್ಲಿ ಇದರ ಚಟಕ್ಕೆ ದಾಸರಾಗುತ್ತಾರೆ. ಕೊನೆಗೆ ಬಿಡಲಾಗದಂತಹ ಸ್ಥಿತಿ ತಲುಪುತ್ತಾರೆ. ಇದರಲ್ಲಿ ಕೆಲ ರಾಸಾಯನಿಕ ಅಂಶಗಳನ್ನು ಮಿಶ್ರಣ ಮಾಡಿರುವ ಕಾರಣ ಪ್ರಾರಂಭದಲ್ಲಿ ಕೆಲ ನಿಮಿಷಗಳ ಕಾಲ ಇದು ಸಂತಸ ನೀಡುತ್ತದೆ. ನಂತರ ಅದು ಮಾರಕವಾಗುತ್ತದೆ ಎಂದು ಎಚ್ಚರಿಸಿದರು.
ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹಾ.ರಾಮಪ್ಪ, ಗ್ರಾಮಾಂತರ ಅಧ್ಯಕ್ಷ ಮುತ್ತುರಾಮಲಿಂಗಂ, ವಿಶ್ವೇಶ್ವರಯ್ಯ ಪ್ರಖಂಡದ ಅಧ್ಯಕ್ಷ ಸತೀಶ್ಚಂದ್ರ, ಮಾತೃ ಮಂಡಳಿ ಅಧ್ಯಕ್ಷರಾದ ಯಶೋದಾ ವೀರಭದ್ರಪ್ಪ, ಸ್ವಪ್ನಾ ಕುಮಾರ್ ತೇಲ್ಕರ್, ಡಿ.ಎ.ರಾಕೇಶ್, ಎನ್.ಎಸ್.ಮಹೇಶ್ವರಪ್ಪ, ಎಚ್.ತಿಮ್ಮಪ್ಪ ಇದ್ದರು.