

ತುಮಕೂರು : ಪೊಲೀಸ್ ಬಂದೋಬಸ್ತ್‌ನಲ್ಲಿ ಪಿಯು ಹಾಗೂ ಪದವಿ ಕಾಲೇಜುಗಳನ್ನು ಆರಂಭಿಸಲಾಗಿದ್ದು, ಬುಧವಾರ ಬೆಳಗ್ಗೆ ನಗರದ ಸರ್ಕಾರಿ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಮುಂಭಾಗ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದರು. ಪೊಲೀಸರು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಲ ಮುಖಂಡರು, ವಕೀಲರ ಜತೆ ಜಿಲ್ಲಾಧಿಕಾರಿ ಕಚೇರಿಗೂ ಭೇಟಿ ನೀಡಿ ಆಗ್ರಹಿಸಿದರು.
ಹಿಜಾಬ್ ಧರಿಸಿ ಬಂದಿದ್ದ 40 ವಿದ್ಯಾರ್ಥಿನಿಯರನ್ನು ಪೊಲೀಸರು ತಡೆದು ಹಿಜಾಬ್ ತೆಗೆದು ಕಾಲೇಜು ಒಳಗೆ ಹೋಗುವಂತೆ ಸೂಚಿಸಿದರು. ಆದರೆ, ವಿದ್ಯಾರ್ಥಿನಿಯರು ನಾವು ಹಿಜಾಬ್ ತೆಗೆಯುವುದಿಲ್ಲ. ನಮಗೆ ಹಿಜಾಬ್ ಧರಿಸಿಯೇ ತರಗತಿ ಒಳಗೆ ಹೋಗಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದರು. ಆಗ ಪೊಲೀಸರು ಶಾಲಾ-ಕಾಲೇಜುಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ರೀತಿ ಗಲಾಟೆ ಮಾಡಬಾರದು. ಪಾಠ ಕೇಳುವುದಾದರೆ ಮೊದಲಿನಂತೆ ಕಾಲೇಜು ಗೇಟ್ ಹೊರಗೆ ಹಿಜಾಬ್ ತೆಗೆದು ಒಳ ಪ್ರವೇಶಿಸಬಹುದು ಎಂದು ಡಿವೈಎಸ್‌ಪಿ ಶ್ರೀನಿವಾಸ್ ಹಾಗೂ ಕಾಲೇಜಿನ ಪ್ರಾಚಾರ್ಯರು ಮನವರಿಕೆ ಮಾಡಿದರು. ವಿದ್ಯಾರ್ಥಿನಿಯರು ನಮಗೆ ಪಾಠವೂ ಬೇಕು, ಹಿಜಾಬ್ ಕೂಡ ಬೇಕು ಎಂದು ಮತ್ತೊಮ್ಮೆ ಪಟ್ಟು ಹಿಡಿಯುವ ಮೂಲಕ ಹೈಡ್ರಾಮಾ ನಡೆಸಿ, ಹಿಜಾಬ್ ಇಲ್ಲದೆ ನಾವು ಒಳಗೆ ಬರುವುದಿಲ್ಲ ಎಂದರು.
ಅಲ್ಲಾ ಹು ಅಕ್ಬರ್ ಘೋಷಣೆ : ತುಮಕೂರಿನ ಬಿಜಿಎಸ್ ವೃತ್ತದಲ್ಲಿ ಸಮಾವೇಶಗೊಂಡು ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದರು. ಮನವರಿಕೆ ನಂತರ 40 ವಿದ್ಯಾರ್ಥಿನಿಯರ ಪೈಕಿ ಐವರು ವಿದ್ಯಾರ್ಥಿನಿಯರ ಪೋಷಕರು ಕಾಲೇಜು ಬಳಿ ಬಂದು ಮಕ್ಕಳಿಗೆ ತರಗತಿಗೆ ಹಾಜರಾಗುವಂತೆ ಹೇಳಿದರು, ಐವರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಹಾಜರಾದರು.
ಇದೇ ರೀತಿ ನಗರದ ವಿವಿಧ ಖಾಸಗಿ ಕಾಲೇಜುಗಳ ಬಳಿಯೂ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ತರಗತಿ ಪ್ರವೇಶಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ತರಗತಿಗೆ ಹಾಜರಾಗದೆ ಮನೆಗಳತ್ತ ತೆರಳಿದರು.
ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಸೇರಿದಂತೆ ನಗರದ ವಿವಿಧ ಕಾಲೇಜುಗಳ ಮುಂದೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.