ಹಲವು ಸಂಸ್ಕೃತಿಗಳ ಸರ್ವಶ್ರೇಷ್ಠ ದೇಶ ನಮ್ಮದು

SRP_11-01jpg
Published on

ಶ್ರೀರಂಗಪಟ್ಟಣ: ಭಾರತ ಸುಸಂಸ್ಕೃತ ದೇಶವಾಗಿದ್ದು, ಇಲ್ಲಿ ಎಲ್ಲ ಜಾತಿ, ಧರ್ಮದ ಜನರು ಅಸಮಾನತೆ ತೊಡೆದು ಭೇದ-ಭಾವವಿಲ್ಲದೆ ನೆಮ್ಮದಿಯಿಂದ ಬದುಕಬೇಕಿದೆ ಎಂದು ಚಂದ್ರವನದ ಪೀಠಾಧಿಪತಿ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿ ಹೇಳಿದರು.

ಪಟ್ಟಣ ಸಮೀಪದ ಚಂದ್ರವನ ಆಶ್ರಮದಲ್ಲಿ ಆಯೋಜಿಸಿದ್ದ 117ನೇ ಬೆಳದಿಂಗಳ ದೀಪಾರತಿ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಹುಣ್ಣಿಮೆ ಪೂಜಾರಾಧನೆ ಬಳಿಕ ಮಾತನಾಡಿದರು. ಸರ್ವ ಧರ್ಮದ ಜನರಿರುವ ಹಲವು ಸಂಸ್ಕೃತಿಗಳ ಸರ್ವಶ್ರೇಷ್ಠ ದೇಶ ಭಾರತ. ಇಂತಹ ನೆಲದಲ್ಲಿ ಜನಿಸಿದ ಹಲವು ಭಾರತೀಯರು ಕೇವಲ ನಕಾರಾತ್ಮಕವಾಗಿಯೇ ಯೋಚಿಸುವುದನ್ನು ಬಿಟ್ಟು ಸಕಾರಾತ್ಮಕವಾಗಿ ಚಿಂತಿಸಿದರೆ ನಮ್ಮಲ್ಲೂ ಸುಭೀಕ್ಷತೆ ನೆಲೆ ನಿಲ್ಲುತ್ತದೆ ಎಂದರು.

ಕೆ.ಆರ್.ಪೇಟೆ ಸಬ್‌ರಿಜಿಸ್ಟ್ರಾರ್ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ ಕೃಷ್ಣರಾಜ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಸ್.ಇ.ಗಂಗಾಧರಸ್ವಾಮಿ ಗುರುರಕ್ಷೆ ಸ್ವೀಕರಿಸಿದರು.ಬಿ.ಎಂ.ಟಿ.ಸಿ.ಯ ನಿವೃತ್ತ ತಾಂತ್ರಿಕ ಪ್ರಧಾನ ವ್ಯವಸ್ಥಾಪಕ ಸಿ.ಜಿ.ಆನಂದ್ ನೇತೃತ್ವದಲ್ಲಿ ಡಿ.ಎಂ.ಎಸ್ ಜ್ಞಾನ ಕುಟೀರ ಶಾಲೆಯ ಕಾರ್ಯದರ್ಶಿ ಮೈಸೂರಿನ ಡಿ.ವಿ.ಹೊನ್ನಪ್ಪ ಅವರು ಶ್ರೀ ಕಾಶಿ ಚಂದ್ರಮೌಳೇಶ್ವರ ಸ್ವಾಮಿಗೆ ಬೆಳ್ಳಿಯ ನಾಗಾಭರಣವನ್ನು ಸಮರ್ಪಿಸಿದರು. ಚಂದ್ರವನ ಆಶ್ರಮದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್, ವಿದ್ವಾನ್ ಕೆ.ಗಂಗಣ್ಣ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net