

ಮೈಸೂರು: ಅಧಿಕಾರದಲ್ಲಿರುವ ವ್ಯಕ್ತಿ ಮನಸ್ಸಿನಲ್ಲಿ ಜನಪರ ಕೆಲಸ ಮಾಡುವ ಆಲೋಚನೆ ಇದ್ದರೆ ಹಲವು ಪ್ರಥಮಗಳಿಗೆ ಸಾಕ್ಷಿಯಾಗಬಹುದು ಎಂಬುದಕ್ಕೆ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ಧಿ ಕೆಲಸಗಳು ಸಾಕ್ಷಿ ಎಂದು ಇತಿಹಾಸ ವಿಶ್ಲೇಷಕ ಧರ್ಮೇಂದ್ರಕುಮಾರ್ ಅಭಿಪ್ರಾಯಪಟ್ಟರು.
ರೋಟರಿ ಮೈಸೂರು ರಾಯಲ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಲಾಮಂದಿರದಲ್ಲಿ ಶನಿವಾರ ಗ್ರಾಮಾಂತರ ಮಕ್ಕಳ ಸಶಕ್ತತೆಗಾಗಿ ಸಹಾಯಾರ್ಥ ಆಯೋಜಿಸಿದ್ದ ‘ಇಂಪು-ಕಂಪು-ತಂಪು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊದಲ ಬಾರಿಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಪದ್ಧತಿ ಜಾರಿಗೊಳಿಸಿದ್ದಲ್ಲದೆ ಪ್ರಥಮ ವಿಶ್ವವಿದ್ಯಾಲಯ, ಕೈಗಾರಿಕೆಗಳು, ಬೆಂಗಳೂರಿನಲ್ಲಿ ವಾಣಿಜ್ಯ ಶಾಲೆ, ಮೈಸೂರಿನಲ್ಲಿ ತಾಂತ್ರಿಕ ವಿದ್ಯಾಲಯ, ಕಿವುಡ ಹಾಗೂ ಮೂಕ ಮಕ್ಕಳ ಶಾಲೆ, ವಯಸ್ಕರ ಶಿಕ್ಷಣ, ಕೃಷಿ ನೀರಾವರಿ ಸೇರಿದಂತೆ ಅನೇಕ ಯೋಜನೆಗಳನ್ನು ಜನರ ಏಳಿಗೆಗಾಗಿ ಜಾರಿಗೆ ತಂದರು ಎಂದು ಬಣ್ಣಿಸಿದರು.
ಅಧಿಕಾರ ವಹಿಸಿಕೊಂಡಾಗ ಅನೇಕ ಸವಾಲುಗಳನ್ನು ಎದುರಿಸಿದ ನಾಲ್ವಡಿ ಅವರು, ಮೈಸೂರು ಸಂಸ್ಥಾನವನ್ನು ವೇಗವಾಗಿ ಅಭಿವೃದ್ಧಿಪಡಿಸಿದರು. ಅರಮನೆ ಒಳಗೆ ಕೇಂದ್ರೀಕೃತವಾಗಿದ್ದ ಜನರನ್ನು ಅರಮನೆಯಾಚೆ ಲಕ್ಷ್ಮೀಪುರಂ, ಚಾಮರಾಜಪುರಂ ಸೇರಿದಂತೆ ಅನೇಕ ಬಡಾವಣೆಗಳನ್ನು ಸ್ಥಾಪಿಸಿ ಅವರಿಗೆಲ್ಲ ಸೂರು ಕಲ್ಪಿಸಿಕೊಟ್ಟರು. ಇದಕ್ಕೆ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಸಾಥ್ ನೀಡಿದರು ಎಂದರು.
ಬೆಂಗಳೂರಿನ ಈಗಿನ ರಾಜಭವನವನ್ನು ಮಿರ್ಜಾ ಇಸ್ಮಾಯಿಲ್ ಅವರ ತಾತ ಕಟ್ಟಿಸಿದ್ದರು. ಈ ಕಟ್ಟಡ ಸೇರಿದಂತೆ ಬೆಂಗಳೂರಿನಲ್ಲಿ 300 ಕಟ್ಟಡಗಳ ಮಾಲೀಕರಾಗಿದ್ದರು. ಅಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ದೀರ್ಘಕಾಲ ಗೆಳೆಯರಾಗಿ, ಮೈಸೂರು ಅರಮನೆ ದಿವಾನರಾಗಿ ಮೈಸೂರಿನ ಸಂಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದನ್ನು ನೆನೆದರು.
ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರೋಟರಿ ಮೈಸೂರು ರಾಯಲ್‌ನ ಅಧ್ಯಕ್ಷ ಧನಂಜಯ್, ಕಾರ್ಯದರ್ಶಿ ಹನುಮಂತರಾವ್, ಗಾಯಕಿ ಶೋಭ ಪಲ್ಲವಿ, ರೋಟರಿ ಸಂಸ್ಥೆಯ ರಾಜಭಟ್, ರೇಖಾ ವೆಂಕಟೇಶ್, ತ್ರಿವೇಣಿ, ಆರ್.ಕೃಷ್ಣ ಇತರರು ಇದ್ದರು.