

ಕೆ.ಆರ್.ಪೇಟೆ: ಭಾರತವೆಂದರೆ ಕೇವಲ ಒಂದೇ ಧರ್ಮ, ಭಾಷೆ, ಸಂಸ್ಕೃತಿಯಲ್ಲ. ಬದಲಾಗಿ ವಿವಿಧ ಧರ್ಮ, ಜಾತಿ, ಭಾಷೆ ಮತ್ತು ಸಂಸ್ಕೃತಿಗಳ ಸಮ್ಮಿಲನ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ಹಿರಿಯರ ತ್ಯಾಗ ಮತ್ತು ಬಲಿದಾನದಿಂದ ನಾವಿಂದು ಸ್ವಾತಂತ್ರ್ಯದ ಸವಿಯನ್ನು ಅನುಭವಿಸುತ್ತಿದ್ದೇವೆ. ಹಿರಿಯರು ತೋರಿದ ಹಾದಿಯಲ್ಲಿ ನಾವೆಲ್ಲರೂ ಸಾಗುವ ಮೂಲಕ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳೋಣ. ನಮ್ಮೊಳಗಿನ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಬದುಕೋಣ ಎಂದು ಹೇಳಿದರು.
ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕ್ಷೇತ್ರಗಳ ಸಾಧಕರು ಮತ್ತು ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ತಹಸೀಲ್ದಾರ್ ನಿಸರ್ಗಪ್ರಿಯ ಧ್ವಜಾರೋಹಣ ಮಾಡಿ ಧ್ವಜ ಸಂದೇಶ ನೀಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಪುರಸಭೆ ಅಧ್ಯಕ್ಷೆ ಮಹಾದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಂ, ವಲಯ ಅರಣ್ಯಾಧಿಕಾರಿ ಗಂಗಾಧರ್, ಸರ್ವೇ ಅಧಿಕಾರಿ ಪರಶಿವನಾಯಕ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಶಶಿಧರ್, ತೋಟಗಾರಿಕೆ ಅಧಿಕಾರಿ ಲೋಕೇಶ್, ಬಿಸಿಎಂ ಅಧಿಕಾರಿ ವೆಂಕಟೇಶ್, ಪೊಲೀಸ್ ನಿರೀಕ್ಷಕರಾದ ಎಂ.ಕೆ.ದೀಪಕ್, ಜಗದೀಶ್ ಇತರರಿದ್ದರು.