

ಚನ್ನರಾಯಪಟ್ಟಣ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚನ್ನರಾಯಪಟ್ಟಣ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ತಿಳಿಸಿದರು.
ತಾಲೂಕಿನ ಯೋಜನಾ ಕಚೇರಿ ವ್ಯಾಪ್ತಿಯ ಉದಯಪುರ ವಲಯದ ಚೌಳಗಾಲ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ 139ನೇ ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಒಂದು ಲಕ್ಷ ರೂ. ಮೊತ್ತದ ಡಿಡಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಸೋಮವಾರ ವಿತರಿಸಿ ಮಾತನಾಡಿ, ಹಲವಾರು ಸಮಾಜಮುಖಿ ಚಿಂತನೆಗಳೊಂದಿಗೆ ಸರ್ವರ ಒಳಿತಿಗಾಗಿ ಧರ್ಮಸ್ಥಳ ಸಂಸ್ಥೆ ಸೇವೆಗೈಯುತ್ತಿದೆ ಎಂದರು.
ಗ್ರಾಮೀಣ ಜನರ ಸಬಲೀಕರಣಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಮಾನವ ಸಂಪನ್ಮೂಲ ಹಾಗೂ ನೆಲ, ಜಲ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಸದ್ಬಳಕೆಯೊಂದಿಗೆ ಗ್ರಾಮೀಣ ಪ್ರದೇಶದ ಪ್ರಗತಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು 1982ರಲ್ಲಿ ಪ್ರಾಯೋಗಿಕವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಿಸಿದ್ದು ಇದು ಯಶಸ್ವಿಯಾಗಿದೆ ಎಂದರು.
ಸಮಿತಿ ಅಧ್ಯಕ್ಷ ದೇವರಾಜ್ ಕಾರ್ಯದರ್ಶಿ ಯೋಗೇಶ್, ನವಜೀವನ ಸಮಿತಿ ಅಧ್ಯಕ್ಷ ಉಮೇಶ್, ಕೃಷಿ ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿಗಳು, ಕಮಿಟಿ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.