ಹಲಗೂರಿನಲ್ಲಿ ಪಟ್ಟಲದಮ್ಮನ ಹಬ್ಬದ ಸಂಭ್ರಮ

15hgr4
Published on

ಹಲಗೂರು: ಹಲಗೂರು ಮತ್ತು ವಳಗೇರಿ ದೊಡ್ಡಿ ಗ್ರಾಮ ದೇವತೆ ಪಟ್ಟಲದಮ್ಮನ ಹಬ್ಬ ಶನಿವಾರ ಸಂಭ್ರಮದಿಂದ ನೆರವೇರಿತು.

ಗ್ರಾಮದ ಹೊರ ಭಾಗದಲ್ಲಿರುವ ಪಟ್ಟಲದಮ್ಮನ ದೇವರ ಮೂರ್ತಿಯನ್ನು ಶುಕ್ರವಾರ ಬೆಳಗ್ಗೆ ಶುಚಿಗೊಳಿಸಿ ಅಭಿಷೇಕ ನಡೆಸಿ ಹೋಮಹವನ ನಡೆಸಿದ ನಂತರ ವಿಶೇಷ ಪುಷ್ಪಗಳಿಂದ ಅಲಂಕರಿಸಿ ಪೂಜೆ ನಡೆಸಲಾಯಿತು.

ಬೆಳಗ್ಗೆಯಿಂದ ಮುತ್ತೈದೆಯರು ದೇವಸ್ಥಾನಕ್ಕೆ ತೆರಳಿ ಅರಿಶಿನ ಕುಂಕುಮ ಸ್ವೀಕರಿಸಿದರು. ಹರಕೆ ಹೊತ್ತವರು ಭಕ್ತರಿಗೆ ಪ್ರಸಾದ ವಿನಿಯೋಗಿಸಿದರು.

ಮಧ್ಯಾಹ್ನ ಹಲಗೂರಿನ ಕರಿ ಬೀದಿಯಲ್ಲಿರುವ ಪಟ್ಟಲದಮ್ಮನ ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿಶೇಷ ಪೂಜೆ ನಡೆಸಲಾಯಿತು. ಗೊಂಬೆ ಕುಣಿತ, ಕೇರಳ ಚಂಡೆ ವಾದ್ಯ, ಕೋಲಾಟ, ವೀರಭದ್ರನ ಕುಣಿತ ಹಾಗೂ ತಮಟೆ ನಗಾರಿಗಳ ಜತೆ ಮೆರವಣಿಗೆ ಸಾಗಿತು. ಸಂಜೆ ಎಳವಾರಗಳ ಜತೆ ಹರಕೆ ಹೊತ್ತವರು ತಂದಿದ್ದ ಸೌದೆಗಳನ್ನು ಕೊಂಡಕ್ಕೆ ಹಾಕಲಾಯಿತು. ನಂತರ ಬಂದ ಭಕ್ತರಿಗೆ ಪಾನಕ ಮಜ್ಜಿಗೆ ನೀಡಲಾಯಿತು.

ಶನಿವಾರ ಬೆಳಗಿನ ಜಾವ ಕರಿಬೀದಿಯ ಕರಗದ ಮನೆಯಿಂದ ದೇವರ ಕರಗ ನಡಿಕೆರಿ ವೀರಭದ್ರ ದೇವಸ್ಥಾನಕ್ಕೆ ತೆರಳಿತು. ಕರಗಕ್ಕೆ ಹೂ ಹೊಂಬಾಳೆ ಮುಡಿಸಿ ವಿವಿಧ ಪುಷ್ವಗಳಿಂದ ಅಲಂಕರಿಸಿ ಪೂಜೆ ಪುನಸ್ಕಾರಗಳು ನಡೆದ ನಂತರ ಬಸಪ್ಪ ಹಾಗೂ ಮುತ್ತೈದೆಯರು ತಂಬಿಟ್ಟಿನ ಆರತಿ ಮೆರವಣಿಗೆ ಮುಖಾಂತರ ದೇವಸ್ಥಾನದ ಆವರಣಕ್ಕೆ ಕರೆತರಲಾಯಿತು. ಬೆಳಗ್ಗೆ 6 ಗಂಟೆಗೆ ಸಮಯದಲ್ಲಿ ಕೊಂಡೋತ್ಸವ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net