ಹಲಗೂರಿನಲ್ಲಿ ಕಾಳಜಿ ಕೇಂದ್ರ ಆರಂಭ

7 mlv 5.
Published on

ಹಲಗೂರು/ಮಳವಳ್ಳಿ: ತಾಲೂಕಿನ ಹಲಗೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೆರೆ ಹಾವಳಿಗೆ ಸಿಲುಕುವ ಸಂತ್ರಸ್ಥರಿಗಾಗಿ ತಾಲೂಕು ಆಡಳಿತದ ವತಿಯಿಂದ ಹಲಗೂರಿನಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.


ಗ್ರಾಮದ ದೊಡ್ಡಕರೆ ತುಂಬಿರುವ ಪರಿಣಾಮ ಕೋಡಿ ಬೀಳುವ ಸಂಭವಿರುವ ಮಾಹಿತಿ ಪಡೆದ ತಹಸೀಲ್ದಾರ್ ಎಂ.ವಿಜಯಣ್ಣ ಮಂಗಳವಾರ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಕ್ರಮ ವಹಿಸಿದರು. ಇದೇ ವೇಳೆ ಮಾತನಾಡಿದ ಅವರು, ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗುತ್ತಿದ್ದು, ಇಲ್ಲಿನ ದೊಡ್ಡ ಕೆರೆ ತುಂಬಿ ಕೋಡಿ ಬೀಳುವ ಸಾಧ್ಯತೆ ಇದೆ. ಕೆರೆ ಸಮೀಪ ವಾಸಿಸುತ್ತಿದ್ದ 12 ಬಡ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದರು.


ನಿರಾಶ್ರಿತರಿಗೆ ತಾಲೂಕು ಆಡಳಿತದಿಂದ ಆಹಾರ ಸಾಮಗ್ರಿ ಸೇರಿದಂತೆ ಎಲ್ಲ ರೀತಿಯ ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. ಸುತ್ತಲಿನ ಗ್ರಾಮಗಳಲ್ಲಿ ಅಪಾಯ ಪ್ರಮಾಣದಲ್ಲಿ ನೀರು ತುಂಬಿರುವ ಕೆರೆ, ಕಟ್ಟೆಗಳ ಕೋಡಿಗಳ ಸಮೀಪದಲ್ಲಿ ಮನೆಗಳಿರುವ ನಿವಾಸಿಗಳಿಗೆ ಸ್ಥಳೀಯ ಪರಿಸರದಲ್ಲಿ ನೆರೆ ಹಾವಳಿಯ ಆತಂಕವಿದ್ದರೆ ಇಲ್ಲಿನ ಕಾಳಜಿ ಕೇಂದ್ರದಲ್ಲಿ ನೋಂದಾಯಿಸಿಕೊಂಡು ನೆಲೆಸುವಂತೆ ತಿಳಿಸಿದರು.


ಮಧ್ಯಾಹ್ನದ ವೇಳೆಗೆ ಕೇಂದ್ರಕ್ಕೆ ಆಗಮಿಸಿದ ಸಂತ್ರಸ್ತರಿಗೆ ತಹಸೀಲ್ದಾರ್ ವಿಜಯಣ್ಣ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಆರೋಗ್ಯ ತಪಾಸಣೆ ಮಾಡಿಸಿದರು. ರಾತ್ರಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಅಡುಗೆ ಸಾಮಗ್ರಿ, ಹೊದಿಕೆ ಹಾಗೂ ನಿತ್ಯ ಬಳಕೆಗೆ ಬೇಕಾಗುವ ವಸ್ತುಗಳನ್ನು ವಿತರಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net