

ವಾಡಿ: ಹಲಕರ್ಟಿಯಿಂದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಬಸ್ ಸೌಕರ್ಯ ಇಲ್ಲದೆ ಪರದಾಡುವಂತಾಗಿದ್ದು, ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಕಾರಣ ವಿದ್ಯಾರ್ಥಿಗಳು ಕಲಬುರಗಿ-ಯಾದಗಿರಿ ಹೆದ್ದಾರಿಯಲ್ಲಿ ಗುರುವಾರ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹಲಕರ್ಟಿಯಿಂದ ವಾಡಿ, ಕಲಬುರಗಿ, ರಾವೂರ, ಶಹಾಬಾದ್, ಚಿತ್ತಾಪುರ ಅಲ್ಲದೆ ಯಾದಗಿರಿಗೆ ತೆರಳುವ ವಿದ್ಯಾರ್ಥಿಗಳೂ ಇದ್ದು, ಸಾರಿಗೆ ಸಂಸ್ಥೆ ಎಕ್ಸ್ಪ್ರೆಸ್ ಬಸ್‌ಗಳನ್ನು ನಿಲ್ಲಿಸದ್ದರಿಂದ ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜಿಗೆ ತೆರಳಲು ಆಗುತ್ತಿಲ್ಲ. ಬೆಳಗ್ಗೆ 7ಕ್ಕೆ ನಿಲ್ದಾಣಕ್ಕೆ ಬಂದರೆ 9ರವರೆಗೆ ಬಸ್ ಇರಲ್ಲ ಎಂದು ಕಿಡಿಕಾರಿದರು.
ಬಸ್ ಖಾಲಿ ಇದ್ದರೂ ಚಾಲಕ, ನಿರ್ವಾಹಕರು ವಿದ್ಯಾರ್ಥಿಗಳನ್ನು ಕಂಡೂ ಕಾಣದಂತೆ ಮತ್ತಷ್ಟು ವೇಗವಾಗಿ ತೆಗೆದುಕೊಂಡು ಹೋಗುತ್ತಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ವಿದ್ಯಾರ್ಥಿಗಳ ವಿಷಯದಲ್ಲಿ ಸಾರಿಗೆ ಇಲಾಖೆ ಅತ್ಯಂತ ಬೇಜವಾಬ್ದಾರಿ ತೋರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ, ಶಾಲೆಯಲ್ಲಿ ಇರಬೇಕಾದ ಮಕ್ಕಳು ಬಸ್‌ಗಾಗಿ ರಸ್ತೆಯಲ್ಲಿ ಕಾಯುವಂಥ ಪರಿಸ್ಥಿತಿ ಎದುರಾಗಿದೆ. ಪ್ರತಿ ಬಾರಿ ಹೋರಾಟ ಮಾಡಿದಾಗ ಒಂದು ವಾರ ಸರಿಪಡಿಸಿ ಮತ್ತದೆ ನಿರ್ಲಕ್ಷ್ಯ ಮುಂದುವರಿಯುತ್ತದೆ ಎಂದು ಎಐಕೆಎಂಎಸ್ ರೈತ ಸಂಘಟನೆ ಮುಖಂಡ ಶಿವಕುಮಾರ ಆಂದೋಲ, ಎಐಡಿಎಸ್‌ಒ ಸಂಘಟನೆ ಸದಸ್ಯ ಸಿದ್ದಾರ್ಥ ಪರತುರಕರ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಗ್ರಾಪಂ ಸದಸ್ಯ ರಾಘವೇಂದ್ರ ಅಲ್ಲಿಪುರ, ಶೇಖಪ್ಪ ತಳ್ಳಳ್ಳಿ, ನೀಲಕಂಠಪ್ಪ ಸಂಗಶೆಟ್ಟಿ, ಹೀರಾ ಜಾಧವ್, ಮುನಿಯಪ್ಪ ಕೊಟಗಿ ಮೊದಲಾದವರು ಪಾಲ್ಗೊಂಡಿದ್ದರು. ಕೆಲಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ವಾಡಿ ಪಿಎಸ್‌ಐ ತಿರುಮಲೇಶ ಕುಂಬಾರ, ವಿದ್ಯಾರ್ಥಿ ಮತ್ತು ಗ್ರಾಮಸ್ಥರ ಮನವೊಲಿಸಿ ಸಾರಿಗೆ ಅಧಿಕಾರಿಗಳ ಜತೆ ಮಾತನಾಡಿದರು. ಸಮಸ್ಯೆ ಪರಿಹರಿಸುವ ವಾಗ್ದಾನ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.