

ಗೋಕಾಕ: ಗ್ರಾಮ ದೇವಿಯರ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಗುರುವಾರ ಸಹಸ್ರಾರು ಭಕ್ತರ ಹರ್ಷೋದ್ಗಾರದ ಮಧ್ಯೆ ವಿಜೃಂಭಣೆಯಿಂದ ಜರುಗಿತು.
ಎರಡನೇ ದಿನದ ರಥೋತ್ಸವಕ್ಕೆ ಶಾಸಕ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಚಾಲನೆ ನೀಡಿದರು. ನಗರದ ದ್ಯಾಮವ್ವ ದೇವಿ ದೇವಸ್ಥಾನದಿಂದ ಹಳೇ ಮುನ್ಸಿಪಾಲ್ಟಿ ಕಚೇರಿ, ಚಾವಡಿ ರಸ್ತೆ ಮಾರ್ಗವಾಗಿ ಒಂದು ರಥ ನಗರದ ಕ್ರೀಮ್ ಕಾರ್ನರ್‌ವರೆಗೆ ತಲುಪಿತು. ಇನ್ನೊಂದು ರಥ ಅದೇ ರಥ ಬೀದಿಯ ಮೂಲಕ ಚೌದರಿ(ಬಾನಾ)ಕೂಟದ ವರೆಗೆ ತಲುಪಿತು.
ರಥೋತ್ಸವದ ಉದ್ದಕ್ಕೂ ಶ್ರೀಮಹಾಲಕ್ಷ್ಮೀ ದೇವಿಯ ಜೈಕಾರ ಮೊಳಗಿದವು. ವಿವಿಧ ವಾದ್ಯಮೇಳ ಹಾಗೂ ಕಲಾ ತಂಡಗಳು ಭಾಗಿಯಾಗಿ ರಥೋತ್ಸವ ಸಂಭ್ರಮ ಹೆಚ್ಚಿಸಿದವು. ಇದೇ ವೇಳೆ ಭಕ್ತರು ಭಂಡಾರ ಎರಚಿ ಭಕ್ತಿಯ ಪರಾಕಾಷ್ಠೆ ಮೆರೆದರು.
ರಥೋತ್ಸವದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಯುವ ನಾಯಕರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಸನತ್ ಜಾರಕಿಹೊಳಿ, ಮುಖಂಡ ಅಶೋಕ ಪೂಜಾರಿ, ಜಾತ್ರಾ ಕಮಿಟಿ ಸದಸ್ಯರಾದ ಪ್ರಭಾಕರ ಚವ್ಹಾಣ, ಬಸವಣ್ಣೆಪ್ಪ ಬನ್ನಿಶೆಟ್ಟಿ, ಶ್ರೀಪಾದ ದೇಶಪಾಂಡೆ, ಅಶೋಕ ಹೆಗ್ಗಣ್ಣವರ, ಅಡಿವೆಪ್ಪ ಕಿತ್ತೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.