

ಕೋಲಾರ: ಹರ್ಷ ಹತ್ಯೆ ಹಿಂದೆ ಎಸ್ಡಿಪಿಐ ಸಂಘಟನೆ ಕೈವಾಡವಿರುವ ಅನುಮಾನವಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ಕೋಲಾರ, ಕೆಜಿಎಫ್ ಪೊಲೀಸ್ ಜಿಲ್ಲೆಗಳ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷದವರು ಆರೋಪಿಸುತ್ತಿರುವಂತೆ ಎಸ್ಡಿಪಿಐ ಜತೆ ಬಿಜೆಪಿಗೆ ಲಿಂಕ್ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪ್ರಕರಣ ಸಂಬಂಧ ಕೆಲವರು ಭಾವುಕ ಹೇಳಿಕೆ ನೀಡುತ್ತಿದ್ದಾರೆ. ಅದರಂತೆ ಆರೋಪಿಗಳನ್ನು ಎನ್ಕೌಂಟರ್ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈಗಾಗಲೆ 8 ಆರೋಪಿಗಳನ್ನು ಬಂಧಿಸಿದ್ದು, ಅನುಮಾನ ಬಂದವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದರು. ರಾಜ್ಯದಲ್ಲಿ ಎಲ್ಲ ಸರ್ಕಾರಗಳ ಅಧಿಕಾರಾವಧಿಯಲ್ಲೂ ಇಂತಹ ಕೊಲೆಗಳು ನಡೆದಿವೆ. ಆಗ ಅವರು ಆರೋಪಿಗಳನ್ನು ಪತ್ತೆ ಮಾಡಲು ತಿಂಗಳಾನುಗಟ್ಟಲೆ ತೆಗೆದುಕೊಳ್ಳುತ್ತಿದ್ದರು. ಆದರೆ, ನಮ್ಮ ಅಧಿಕಾರಿಗಳು ಘಟನೆ ನಡೆದ 24 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದ್ದು, ಇಬ್ಬರು ಹಿರಿಯ ಅಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ಹರ್ಷ ಕೊಲೆಯಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಲು ಅಗತ್ಯ ದಾಖಲೆ, ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗುವುದು. ಜತೆಗೆ ಸರ್ಕಾರದಿಂದಲೇ ವಕೀಲರ ನಿಯೋಜನೆ ಮಾಡಲಾಗುವುದು ಎಂದರು.
ಹರ್ಷ ಅವರ ಮನೆಗೆ ಭೇಟಿ ನೀಡಿದ್ದಾಗ ಅವರ ತಾಯಿ, ನನ್ನ ಮಗನನ್ನು ನೀವು ವಾಪಸ್ ತಂದುಕೊಡಲು ಸಾಧ್ಯವಿಲ್ಲ, ಆದರೆ, ಅವನ ಸಾವು ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಶಿವಮೊಗ್ಗದಲ್ಲಿ ಕೋಟೆ, ದೊಡ್ಡಪೇಟೆ ಎಂಬ ಎರಡು ಪೊಲೀಸ್ ಠಾಣೆಗಳಿವೆ. ಹರ್ಷ ಕೊಲೆ ಪ್ರಕರಣದಲ್ಲಿ ಭಾಗಿಯಾದವರು ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಒಬ್ಬನ ವಿರುದ್ಧ 11, ಮತ್ತೊಬ್ಬನ ವಿರುದ್ಧ 7 ಪ್ರಕರಣಗಳು ಈ ಠಾಣೆಗಳಲ್ಲಿ ದಾಖಲಾಗಿದ್ದವು. ಇಷ್ಟಾದರೂ ಕ್ರಮ ಕೈಗೊಳ್ಳದೆ ಅವರನ್ನು ಸಾಕಿಕೊಂಡಿದ್ದರು. ಇದು ಪೊಲೀಸರ ವೈಲ್ಯವಾಗಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನಿಷೇಧಾಜ್ಞೆ ನಡುವೆಯೂ ಹರ್ಷ ಶವಯಾತ್ರೆಯಲ್ಲಿ ಸಚಿವ, ಸಂಸದರು ಭಾಗಿಯಾದ ಬಗ್ಗೆ ಸಿದ್ದರಾಮಯ್ಯ ಆರೋಪ ಮಾಡಿರುವುದು ಸರಿಯಲ್ಲ. ಮಂತ್ರಿಗಳಿಗೆ ಕಾರ್ಯಕರ್ತ ಹರ್ಷ ಆಪ್ತರಾಗಿದ್ದರು. ಹೀಗಾಗಿ ಅವರು ಶವಯಾತ್ರೆಯಲ್ಲಿ ಭಾಗಿಯಾಗಿದ್ದು. ಅವರ ಹಿಂದೆ ಬೆಂಬಲಿಗರನ್ನು ಬರಬೇಡಿ ಎಂದು ಹೇಳಲು ಸಾಧ್ಯವಾಗುತ್ತದೆಯೇ? ನಾವು ಅಂದು ತಡೆದಿದ್ದರೆ ಐದಾರು ಹೆಣಗಳು ಉರುಳುತ್ತಿದ್ದವು. ಆದರೆ, ಪೊಲೀಸರು ಅಂತಹ ಘಟನೆ ನಡೆಯದಂತೆ ನಿಯಂತ್ರಿಸಿದ್ದಾರೆ. ನಿಯಮ ಉಲ್ಲಂಘನೆ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರಿಗೆ ಮೇಕೆದಾಟು ಪಾದಯಾತ್ರೆ ವೇಳೆ ಎನ್ಡಿಎಂಎ ಕಾಯ್ದೆ ಉಲ್ಲಂಘಿಸಿದ್ದು ನೆನಪಿಲ್ಲವೇ? ಪಾರದರ್ಶಕವಾಗಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ರಾಜ್ಯಾದ್ಯಂತ ಶಾಂತಿ- ಸುವ್ಯವಸ್ಥೆ ಇದೆ ಎಂದರು.