

ಬೆಳಗಾವಿ: ಹರ್ ಘರ್ ತಿರಂಗಾ ಕಾರ್ಯಕ್ರಮ ಯಶಸ್ಸಿಗಾಗಿ ಸರ್ಕಾರ ವ್ಯಾಪಕ ಪ್ರಚಾರ ನೀಡುತ್ತಿದೆ. ಆದರೆ, ಧ್ವಜಾರೋಹಣದ ವಿಧಾನಗಳ ಬಗ್ಗೆ ಜನತೆಯಲ್ಲಿನ ಅನುಮಾನಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ತಡವರಿಸುತ್ತಿದ್ದಾರೆ. ಸರ್ಕಾರ ಗೊಂದಲಗಳನ್ನು ನಿವಾರಿಸಿ, ಶೀಘ್ರ ಸ್ಪಷ್ಟ ಸೂಚನೆ ನೀಡಬೇಕಿದೆ.
ಸ್ವಾತಂತ್ರೃ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ಸಾರ್ವಜನಿಕರು ತಮ್ಮ ಮನೆ ಮೇಲೆ ಧ್ವಜಾರೋಹಣ ಮಾಡುವುದಕ್ಕಾಗಿ ಧ್ವಜ ಪೂರೈಕೆಗೆ ಸರ್ಕಾರ ಕ್ರಮವಹಿಸಿದ್ದು, ಈಗಾಗಲೇ ಎಲ್ಲ ಜಿಲ್ಲಾಡಳಿತಗಳಿಗೆ ಸಾಕಷ್ಟು ಧ್ವಜಗಳನ್ನು ರವಾನಿಸಿದೆ. ಆದರೆ, ಧ್ವಜಾರೋಹಣ ಹೇಗೆ ಮಾಡುವುದು? ಯಾವ ಸಮಯ? ವಿಧಾನ ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಪಾಲಿಸುವುದರ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲದೇ, ಸರ್ಕಾರದ ಮುಂದಿನ ನಿರ್ದೇಶನಕ್ಕಾಗಿ ಜಿಲ್ಲಾಧಿಕಾರಿಗಳು ಎದುರು ನೋಡುತ್ತಿದ್ದಾರೆ. ನರೇಗಾ ಕೂಲಿಕಾರರು ತಮ್ಮ ಮನೆ ಮೇಲೆ ಕಡ್ಡಾಯವಾಗಿ ಧ್ವಜಾರೋಹಣ ಮಾಡಿ ದೇಶ ಭಕ್ತಿ ಬಿಂಬಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆದೇಶ ನೀಡಿದೆ. ಕಾರ್ಯಕ್ರಮ ಯಶಸ್ಸಿಗೆ ಅನುಸರಿಬೇಕಾದ 10 ಅಂಶಗಳನ್ನು ಉಲ್ಲೆಖಿಸಿದೆ. ಆದರೆ, ಯಾವ ರೀತಿ ಧ್ವಜಾರೋಹಣ ಮಾಡಬೇಕು ಎಂಬುವುದನ್ನು ತಿಳಿಸಿಲ್ಲ.
ಗೊಂದಲಗಳ ಬಗ್ಗೆ ಕಂದಾಯ ಇಲಾಖೆಯ ಬೆಳಗಾವಿ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಮಾತನಾಡಿ, ಆ.13ರಿಂದ 17ರ ವರೆಗೆ ತಿರಂಗಾ ಧ್ವಜ ಹಾರಿಸಬೇಕು ಎಂದು ಪ್ರಚಾರ ಮಾಡುತ್ತಿರುವ ತಂಡವನ್ನು ಜನ ಪ್ರಶ್ನಿಸುತ್ತಿರುವ ಗೊಂದಲಗಳಿಗೆ ಉತ್ತರವೇ ಸಿಗುತ್ತಿಲ್ಲ. ಪ್ರತಿ ಮನೆ ಮೇಲೂ ತಿರಂಗಾ ಹಾರಾಡಬೇಕು ಎಂದಾದರೆ, ಧ್ವಜ ಸಂಹಿತೆಯನ್ನು ಮತ್ತಷ್ಟು ಸರಳಗೊಳಿಸಬೇಕಿದೆ. ಜತೆಗೆ ಧ್ವಜದ ಗೌರವಕ್ಕೆ ಧಕ್ಕೆ ತರಬಲ್ಲ ಅಚಾತುರ್ಯಗಳ ಸಾಧ್ಯತೆಗೂ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಸಾರ್ವಜನಿಕರು ಪಾಲಿಸಬೇಕಾದ ವಿಧಾನಗಳ ಬಗ್ಗೆ ಸ್ಪಷ್ಟ ನಿರ್ದೇಶನ ಬಂದರೆ ಕಾರ್ಯಕ್ರಮವನ್ನು ಮತ್ತಷ್ಟು ಅಚ್ಚುಕಟ್ಟಾಗಿ ನೆರವೇರಿಸಲು ಸಾಧ್ಯ. ಪ್ರಚಾರ ಕಾರ್ಯಕ್ರಮಗಳಲ್ಲಿ ಜನತೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಮುಂದಿನ ಆದೇಶದ ಬಳಿಕ ತಿಳಿಸುತ್ತೇವೆ ಎಂದು ಹೇಳುತ್ತಿದ್ದೇವೆ ಎಂದರು.
ಧ್ವಜ ಗೌರವ ಕಾಪಾಡುವಲ್ಲಿ ಕಠಿಣ ನಿಯಮಗಳನ್ನು ಸರ್ಕಾರ ವಿಧಿಸಲಿ ಎಂಬ ಅಭಿಪ್ರಾಯ ಪಟ್ಟಿರುವ ನಿವೃತ್ತ ಸೇನಾಧಿಕಾರಿಗಳ ಸಂಘದ ಪದಾಧಿಕಾರಿಗಳು, ಇಂದಿನ ದಿನಗಳಲ್ಲಿ ಬಹುತೇಕರ ಮನೆ ಮೇಲೆ ಜಾತಿ, ಧರ್ಮ, ಸಂಘಟನೆ ಹಾಗೂ ರಾಜಕೀಯ ಪಕ್ಷಗಳಿಗೆ ಸೇರಿದ ಒಂದಿಲ್ಲೊಂದು ಧ್ವಜ ಹಾರಾಡುತ್ತಲೇ ಇರುತ್ತವೆ. ಯಾವುದೇ ನಿಯಮವಿಲ್ಲದೆ ಮನಬಂದಂತೆ ಅವುಗಳನ್ನು ಹಾರಿಸಲಾಗುತ್ತಿದೆ. ಅವುಗಳಂತೆಯೇ ತಿರಂಗಾ ಧ್ವಜವನ್ನು ಮೂರು ದಿನದ ಅವಧಿಯಲ್ಲೂ ಮುಕ್ತಗೊಳಿಸುವುದು ಬೇಡ ಎನ್ನುವುದರ ಕುರಿತು ಪತ್ರಿಕೆ ಮೂಲಕ ಸರ್ಕಾರಕ್ಕೆ ಹಲವು ಸಲಹೆ ನೀಡಿದ್ದಾರೆ.
1) ಸಾರ್ವಜನಿಕರ ಮನೆ ಮೇಲೆ ಯಾವುದೇ ಪಕ್ಷ, ಧರ್ಮ, ಜಾತಿ ಹಾಗೂ ಸಂಘಟನೆಗಳ ಧ್ವಜ ಇರದಂತೆ ನೋಡಿಕೊಳ್ಳುವುದು.
2) ಧ್ವಜಾರೋಹಣ ಸಂದರ್ಭದಲ್ಲಿ ಶಿಸ್ತು ಕಾಪಾಡಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಮೂಲಕ ಜಾಗೃತಿ ಮೂಡಿಸುವುದು.
3) ಧ್ವಜಾರೋಹಣ ಕೌಶಲಗಳ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಸಾಮೂಹಿಕ ತರಬೇತಿ (ಶಿಕ್ಷಕರಿಂದ-ವಿದ್ಯಾರ್ಥಿಗಳಿಂದ ಪಾಲಕರಿಗೆ) ನೀಡುವುದು.
4) ಧ್ವಜದ ಗೌರವ ಕಾಪಾಡುವ ನಿಟ್ಟಿನಲ್ಲಿ ಅನಸರಿಸಬೇಕಾದ ಕ್ರಮಗಳ ಕುರಿತು ವಿದ್ಯಾರ್ಥಿ ಸಂಘಟನೆಗಳು, ಎನ್‌ಜಿಒ ಹಾಗೂ ಸಾಮಾಜಿಕ ಸಂಘಸಂಸ್ಥೆಗಳಿಂದ ನಿರಂತರ ಪ್ರಚಾರ ಮಾಡುವುದು.
ಬೆಳಗಾವಿ ಜಿಲ್ಲೆಗೆ 30 ಸಾವಿರ ಧ್ವಜಗಳನ್ನು ಸರ್ಕಾರ ಪೂರೈಸಿದೆ. 25 ರೂ.ಗಳಿಗೆ ಒಂದರಂತೆ ವಿತರಣೆ ಮಾಡಲಾಗುತ್ತಿದೆ. ಸದ್ಯಕ್ಕೆ ಸಾರ್ವಜನಿಕರು ತಮ್ಮ ಮನೆ ಮೇಲೆ ಧ್ವಜ ಹಾರಿಸಬೇಕು ಎಂದಷ್ಟೇ ಪ್ರಚಾರ ಮಾಡಲಾಗುತ್ತಿದೆ. ಯಾವ ಅಳತೆಯ ಧ್ವಜಗಳನ್ನು ಹಾರಿಸಬೇಕು? ಹೇಗೆ? ಸಮಯ? ಎಂಬುವದರ ಬಗ್ಗೆ ಸರ್ಕಾರದ ನಿರ್ದೇಶನ ಈವರೆಗೂ ಬಂದಿಲ್ಲ.| ಡಾ.ನಿತೇಶ ಪಾಟೀಲ ಜಿಲ್ಲಾಧಿಕಾರಿ ಬೆಳಗಾವಿ
|ರವಿ ಗೋಸಾವಿ ಬೆಳಗಾವಿ