

ಚಿಕ್ಕೋಡಿ: ದೇಶದ ಪ್ರತಿಯೋರ್ವ ನಾಗರಿಕನಲ್ಲಿ ದೇಶಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗಾ ಎಂಬ ಅಭಿಯಾನ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಚಿಂಚಣಿ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ತಾಲೂಕಿನ ಚಿಂಚಣಿಯ ಸಿದ್ದ ಸಂಸ್ಥಾನಮಠದಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮತ್ತು ಮನೆ ಮನೆಗೂ ರಾಷ್ಟ್ರಧ್ವಜ ಎಂಬ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೈಕ್ ರ‌್ಯಾಲಿ ಹಾಗೂ ರಾಷ್ಟ್ರಧ್ವಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ನಮ್ಮ ನಾಡಿನಲ್ಲಿ ಕೆಲವು ಹಬ್ಬಗಳು ಕೆಲವೊಂದು ಜಾತಿಗೆ ಸೀಮಿತವಾಗಿದ್ದವು. ಆದರೆ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮತ್ತು ಮನೆ ಮನೆಗೂ ರಾಷ್ಟ್ರಧ್ವಜ ಕಾರ್ಯಕ್ರಮ ಯಾವ ಜಾತಿಗೆ ಸೀಮಿತವಾಗಿಲ್ಲ. ಇದೊಂದು ರಾಷ್ಟ್ರ ಹಬ್ಬ ಎಂದರು.
ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಸ್ವಾತಂತ್ರೃಕ್ಕಾಗಿ ಹೋರಾಡಿದ ಮಹನೀಯರ ಇತಿಹಾಸವನ್ನು ಮುಂದಿನ ಜನಾಂಗಕ್ಕೆ ತಿಳಿಪಡಿಸಬೇಕು ಎಂದರು. ಮನೆ ಮನೆಗೂ ರಾಷ್ಟ್ರಧ್ವಜ ಕಾರ್ಯಕ್ರಮಕ್ಕೆ ಚಿಂಚಣಿಯಿಂದ ಆರಂಭವಾಗುವ ಈ ಬೈಕ್ ರ‌್ಯಾಲಿ ಚಿಕ್ಕೋಡಿ-ಸದಲಗಾ ಮತಕ್ಷೇತ್ರದ 75 ಕಿ.ಮೀ. ಸಂಚರಿಸಲಿದೆ. ಸ್ವಾತಂತ್ರ್ಯೋತ್ಸವಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ತಿಳಿಸುವುದೆ ರ‌್ಯಾಲಿಯ ಉದ್ದೇಶ ಎಂದರು. ಚಿಕ್ಕೋಡಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಅಭಯ ಪಾಟೀಲ, ಸಂಜಯ ಪಾಟೀಲ, ಅಪ್ಪಾಸಾಬ ಚೌಗಲಾ, ಅನಿಲ ಪಾಟೀಲ, ರಾಮಗೌಡ ಪಾಟೀಲ, ಸುಖದೇವ ಜಾಧವ, ಶಾಂಭವಿ ಅಶ್ವತಪುರ, ಶಕುಂತಲಾ ಡೋಣವಾಡೆ, ಅಶೋಕ ಹರಗಾಪುರೆ, ಬ್ರಹ್ಮಾನಂದ ಬೇನಾಡಿ ಇದ್ದರು.