ಹರಿಹರೆಯದ ಮಕ್ಕಳಿಗೆ ತಿಳಿವಳಿಕೆ ಹೇಳಿ

26spt3
Published on

ಸೋಮವಾರಪೇಟೆ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಹೇಯಕೃತ್ಯಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದೆ ಎಂದು ಹಿರಿಯ ವಕೀಲೆ ಎಚ್.ಆರ್. ಪವಿತ್ರಾ ಎಚ್ಚರಿಸಿದರು.
ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಲ್ಲಿ ಮಹಿಳಾ ದೌರ್ಜನ್ಯ ನಿಗ್ರಹ ಸಮಿತಿ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಸಹಭಾಗಿತ್ವದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ದೌರ್ಜನ್ಯ ಮತ್ತು ಪೋಕ್ಸೊ ಕಾಯ್ದೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲೈಂಗಿಕ ಹಾಗೂ ಎಲ್ಲ ರೀತಿಯ ಅಪರಾಧ, ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ 2012ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ಬಂದಿದೆ. ಹದಿಹರೆಯದ ಆಕರ್ಷಣೆಗೆ ಒಳಗಾಗಿ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವಂತ ಸಂದರ್ಭಗಳನ್ನು ಯಾರು ತಂದುಕೊಳ್ಳದಂತೆ ಕಿವಿಮಾತು ಹೇಳಿದರು.
ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಗಂಡು ಮಕ್ಕಳಲ್ಲೂ ಮಾನಸಿಕ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ. ಪೋಷಕರು ತಮ್ಮ ಮಕ್ಕಳಿಗೆ ಅವಕಾಶ ಸಿಕ್ಕಾಗ ತಿಳಿಹೇಳಬೇಕು ಎಂದರು.
ಹೆಣ್ಣು ಮಕ್ಕಳು ಶಾಲಾ-ಕಾಲೇಜು, ಪ್ರಯಾಣದ ಸಂದರ್ಭದಲ್ಲಿ ಸಾಕಷ್ಟು ಕಿರುಕುಳವನ್ನು ಅನುಭವಿಸುತ್ತಲೇ ಇರುತ್ತಾರೆ. ಪ್ರೌಢಾವಸ್ಥೆಯನ್ನು ತಲುಪುವ ಮೊದಲು ಸುಮಾರು ಶೇ.25ರಷ್ಟು ಹುಡುಗಿಯರು ಕೆಲವು ರೀತಿಯ ನಿಂದನೆ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ. ಶಾಲಾ-ಕಾಲೇಜು ಹಂತದಲ್ಲೇ ಲೈಂಗಿಕ ದೌರ್ಜನ್ಯ ಹಾಗೂ ತಡೆಗಟ್ಟುವ ಬಗ್ಗೆ ಮುಕ್ತವಾಗಿ ಚರ್ಚೆಯಾಗಬೇಕಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಧನಲಕ್ಷ್ಮೀ, ಪ್ರಾಧ್ಯಾಪಕಿ ಡಾ.ಕುಸುಮ, ಮುಖ್ಯಪೇದೆ ವೀಣಾ, ಸಿಬ್ಬಂದಿ ಎಚ್.ಜೆ.ಜವರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net