

ಹಾಸನ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಳೆದ 14 ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದ ಹರಿರಾಂ ಶಂಕರ್ ಅವರನ್ನ ಸರ್ಕಾರ ವರ್ಗಾವಣೆ ಮಾಡಿದ್ದು,
ಇವರ ಸ್ಥಾನಕ್ಕೆ ಬೆಂಗಳೂರು ದಕ್ಷಿಣದಲ್ಲಿ ಸಂಚಾರ ವಿಭಾಗದ ಡಿಸಿಪಿಯಾಗಿದ್ದ ಎಂ.ಎಸ್. ಮೊಹಮ್ಮದ್ ಸುಜೀತಾ ಅವರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.
ಕಳೆದ ರಾತ್ರಿ ಬರೋಬ್ಬರಿ 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಜಿಲ್ಲೆಯ ಎಸ್‌ಪಿಯೂ ಬದಲಾವಣೆ ಆಗಿದ್ದಾರೆ. ಕಳೆದ 14 ತಿಂಗಳಿಂದ ಹಾಸನ ಎಸ್ಪಿಯಾಗಿದ್ದ ಹರಿರಾಂ ಶಂಕರ್ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಇಲಾಖೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಜಾರಿ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.
ಹಾಗೆಯೇ ಮೊಬೈಲ್ ಪತ್ತೆ ಸೇರಿದಂತೆ ಇಲಾಖೆಯೊಳಗೆ ತಂತ್ರಜ್ಞಾನ ಅಳವಡಿಸಿದ್ದರು. ಮುಖ್ಯವಾಗಿ ಪೊಲೀಸ್ ಇಲಾಖೆಯಲ್ಲಿ ಶಿಸ್ತು ತರಲು ಶ್ರಮಿಸಿದ್ದರು. ಜಿಲ್ಲೆಯಲ್ಲಿ ನಡೆದಿದ್ದ ಕೊಲೆ, ಸುಲಿಗೆ ಸೇರಿದಂತೆ ಹತ್ತಾರು ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ತಮ್ಮ ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೂಲಕ ಶ್ರಮಿಸಿ ಯಶಸ್ವಿಯಾಗಿದ್ದರು.
ಹೊಸ ಎಸ್‌ಪಿ ಸುಜೀತಾ ಅವರು 2014 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರ ಆಗಮನದ ಮೂಲಕ ಜಿಲ್ಲೆಯಲ್ಲಿ ಡಿಸಿ, ಎಸ್ಪಿ, ಜಿಪಂ ಸಿಇಒ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳು ನೆಲೆಗೊಂಡಂತೆ ಆಗಿದೆ.