

ಹಾಸನ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ ಮೂರನೇ ಬಾರಿಗೆ ಬಿಜೆಪಿ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ನಗರದ ಶ್ರೀಗಂಧದ ಕೋಠಿ ಬಳಿ ಆರ್.ಸಿ. ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಘೋಷಣೆ ಕೂಗುವ ಮೂಲಕ ಸಂಭ್ರಮಾಚರಿಸಿದರು.
ಇದೆ ವೇಳೆ ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ ಮಾತನಾಡಿ, ಹರಿಯಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ ಮೂರನೇ ಬಾರಿಗೆ ಬಿಜೆಪಿ ಜಯಭೇರಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾರ್ಯಕರ್ತರ ಅಪಾರ ಶ್ರಮ ಇದೆ. ಮಾಧ್ಯಮಗಳು ಮತಗಟ್ಟೆ ಸಮೀಕ್ಷೆ ಬಿಡುಗಡೆ ಮಾಡಿದ್ದರೂ ಅದೆಲ್ಲವೂ ತಲೆ ಕೆಳಕಾಗಿ ಬಿಜೆಪಿ ಜಯಗಳಿಸಿದೆ. ಎಲ್ಲರ ಸಮೀಕ್ಷೆ ಮೀರಿ ಇವತ್ತು ಹರಿಯಾಣದಲ್ಲಿ ನಮ್ಮ ಪಕ್ಷ ಜಯಬೇರಿ ಬಾರಿಸಿದೆ. ಈ ನಿಟ್ಟಿನಲ್ಲಿ ಹಾಸನ ನಗರದಲ್ಲಿ ಪಕ್ಷದಿಂದ ಸಂಭ್ರಮ ಆಚರಣೆ ಮಾಡುತ್ತಿದ್ದೇವೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ಬಿಜೆಪಿ ಹೀನಾಯವಾಗಿ ಸೋಲಲಿದೆ ಎಂದು ಮಾಧ್ಯಮಗಳ ಸಮೀಕ್ಷೆ ಭವಿಷ್ಯ ನುಡಿದಿದ್ದವು. ಈಗ ಅದನ್ನು ಮೀರಿಸಿ ಬಿಜೆಪಿ ಪಕ್ಷ ಹರಿಯಾಣದಲ್ಲಿ ಗೆದ್ದಿದೆ. ಮುಂದೆ ನಡೆಯುವ ಎಲ್ಲ ಚುನಾವಣೆಯಲ್ಲೂ ಕೂಡ ಬಿಜೆಪಿ ಗೆಲುವು ಪಡೆಯಲಿದೆ. ಜಮ್ಮು ಮತ್ತು ಕಾಶ್ಮೀರ ಕೂಡ ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದೆ. ಜೆ.ಪಿ. ನೆಡ್ಡಾ ಕೂಡ ಹರಿಯಾಣದವರು ಆಗಿರುವುದರಿಂದ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶ ಬಂದಿರುವುದು ದೇಶದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು ತಂದಿದೆ ಎಂದು ಹೇಳಿದರು.
ಇದೆ ವೇಳೆ ಬಿಜೆಪಿ ನಗರಾಧ್ಯಕ್ಷ ಮಂಜುನಾಥ್, ಮುಖಂಡರಾದ ಪ್ರೀತಿವರ್ಧನ್, ಚನ್ನಂಗಿಹಳ್ಳಿ ಶ್ರೀಕಾಂತ್, ಜೀವನ್, ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಬಿ.ಎಸ್. ರವಿಕುಮಾರ, ಪ್ರಧಾನ ಕಾರ್ಯದರ್ಶಿ ಕಿರಣ್. ಖಜಾಂಚಿ ಬಿ.ಎನ್. ಮೂರ್ತಿ. ಚನ್ನಕೇಶವ, ವೇದಾವತಿ, ರಾಜೀವ್, ಗುರು, ಕಾರ್ತಿಕ್ ಇತರರು ಉಪಸ್ಥಿತರಿದ್ದರು.