ಹರಿಮತಿ ಚೌಡೇಶ್ವರಿ ದೇವಿ ಜಾತ್ರೆ ಸಂಪನ್ನ

Chowdeshwari Maata
Published on

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಶ್ರೀ ಹರಿಮತಿ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿ, ಸಂಪನ್ನಗೊಂಡಿತು.

ಪಟ್ಟಣದ ಮಂಜುನಾಥ ಶಾಲೆಯ ರಸ್ತೆಯಲ್ಲಿನ ಹರಿಮತಿ ಚೌಡೇಶ್ವರಿ ದೇವಿಯ ಜೀರ್ಣೋದ್ಧಾರ ಟ್ರಸ್ಟ್‌ನಿಂದ ಆಯೋಜಿಸಿದ್ದ ಜಾತ್ರೆಯಲ್ಲಿ ದೇವಿಗೆ ವಿಶೇಷ ಪುಷ್ಪಾಲಂಕಾರ ಸೇವೆ, ವಿವಿಧ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿದವು.

ಜಾತ್ರೆ ಅಂಗವಾಗಿ ಸೋಮವಾರ ಮದವಣಗಿತ್ತಿ ಪೂಜಾ ಶಾಸ್ತ್ರದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಮಂಗಳವಾರ ದೇವಿಗೆ ಗಂಗಾಪೂಜೆ, ನಂತರ ಕೆಂಡಾರ್ಚನೆ ನಡೆಯಿತು. ನೆರೆದಿದ್ದ ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು.

ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಎಂ. ಸತೀಶ್‌ಕುಮಾರ್ ಮಾತನಾಡಿ, ಇಷ್ಟಾರ್ಥ ಸಿದ್ಧಿಸುವ ಶಕ್ತಿದೇವತೆಯಾದ ಹರಿಮತಿ ಚೌಡೇಶ್ವರಿ ದೇವಿಯೂ ದುಷ್ಟ ಶಕ್ತಿಗಳಿಂದ ಭಕ್ತರನ್ನು ರಕ್ಷಿಸುತ್ತಿದ್ದಾಳೆ. ಸಮಸ್ಯೆಗಳ ಪರಿಹಾರಕ್ಕಾಗಿ ಬೇಡಿ ಬರುವ ಭಕ್ತರಿಂದ ಟ್ರಸ್ಟ್ ಆಗಲಿ, ದೇವಸ್ಥಾನದವರಾಗಲಿ ಹಣ ಪಡೆಯುವುದಿಲ್ಲ. ಅಮ್ಮನ ಸನ್ನಿಧಿ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ದೇವಿಯ ಜಾತ್ರೆಗೆ ರಾಜ್ಯದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಮಂಗಳೂರು, ಹೊರರಾಜ್ಯದ ಕೇರಳ, ತಮಿಳುನಾಡಿನಿಂದಲೂ ಭಕ್ತರು ಬರುತ್ತಾರೆ. ಪೂಜೆ ನೆರವೇರಿಸಿ ಪ್ರಾರ್ಥಿಸುತ್ತಾರೆ. ಹಲವು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಹೋಮ, ಹವನ ಪೂಜೆಯನ್ನು ವೇದ ಬ್ರಹ್ಮ ಪುರೋಹಿತ ಪುನೀತ್ ಶಾಸ್ತ್ರಿ ನೆರವೇರಿಸಿದರು. ಟ್ರಸ್ಟ್ ಸದಸ್ಯರಾದ ಪೂಜಾರ್ ಕಾಳ್ಯ ನಾಯ್ಕ, ಹೀರಾ ನಾಯ್ಕ, ಮಂಜುನಾಥ್, ಶಿವಾನಂದಪ್ಪ, ಆನಂದ್, ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net