

ಚಿತ್ರದುರ್ಗ: ಹರಿವಾಯು ಗುರು ಸೇವಾ ಟ್ರಸ್ಟ್‌ನಿಂದ ವಿಶೇಷವಾಗಿ ಆಚರಿಸಲ್ಪಡುವ ‘ಹರಿದಾಸ ಹಬ್ಬ-ಸಪ್ತಾಹ’ಕ್ಕೆ ನಗರದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ವ್ಯಾಸ ವಿಜ್ಞಾನ-ದಾಸ ಸುಜ್ಞಾನ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಗುರುರಾಜ ಸೇವಾ ಸಂಘ ಹಾಗೂ ಅಖಿಲ ಭಾರತ ಮಾಧ್ವ ಮಹಾಮಂಡಲ ಚಿತ್ರದುರ್ಗ ಶಾಖೆಯಿಂದ ವಿಶ್ವಪ್ರಸನ್ನ ತೀರ್ಥ ಶ್ರೀ ಅವರ ಶೋಭಾಯಾತ್ರೆ ನಗರದ ರಾಜ ಬೀದಿಗಳಲ್ಲಿ ಭಾನುವಾರ ಅದ್ದೂರಿಯಾಗಿ ಜರುಗಿತು.
ಬೆಳ್ಳಿ ವರ್ಣದ ಸುಂದರ ಸಾರೋಟಿನೊಳಗೆ ಶ್ರೀಗಳು ಆಸೀನರಾದರು. ನಂತರ ಆನೆಬಾಗಿಲ ಬಳಿಯ ಸುವೃಷ್ಠಿ ಪ್ರಾಣದೇವರ ಸನ್ನಿಧಾನದಿಂದ ಗಾಯತ್ರಿ ಕಲ್ಯಾಣ ಮಂಟಪದವರೆಗೆ ಮಂಗಳವಾದ್ಯ, ಭಜನೆ, ವೇದಪಾರಾಯಣದೊಂದಿಗೆ ಶೋಭಾಯಾತ್ರೆ ಸಾಗಿತು. ಸದ್ಭಕ್ತರು ಜಯಘೋಷ ಮೊಳಗಿಸಿದರು.
ರಾಯರ ಮಠದಲ್ಲಿ ವಿಶೇಷ ಪೂಜೆ: ರಾಘವೇಂದ್ರಸ್ವಾಮಿ ಮಠದಲ್ಲಿ ಕಲಶ ಸ್ಥಾಪನೆ, ಸಂಕಲ್ಪ, ಪವಮಾನ ಮತ್ತು ಧನ್ವಂತರಿ ಹೋಮ, ಪೂರ್ಣಾಹುತಿ, ಸಂಸ್ಥಾನ ಪೂಜೆ, ಮಹಾಮಂಗಳಾರತಿ, ವೈಶ್ವಾನರ ಯಜ್ಞ ಶಾಸ್ತ್ರೋಕ್ತವಾಗಿ ನೆರವೇರಿದವು.
ಕಲ್ಯಾಣ ಮಂಟಪದಲ್ಲಿ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಅವರಿಗೆ ಗುರುವಂದನೆ ಸಮರ್ಪಿಸಲಾಯಿತು. ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಗುರುರಾಜ ಸೇವಾ ಸಂಘದ ಅಧ್ಯಕ್ಷ ಎನ್.ವೇದವ್ಯಾಸ ಆಚಾರ್ಯ, ಮಾಧ್ವ ಮಹಾಮಂಡಲ ಚಿತ್ರದುರ್ಗ ಶಾಖೆ ಅಧ್ಯಕ್ಷ ಎಸ್.ಎನ್.ಪ್ರಾಣೇಶ್, ಸಿ.ಗೋವಿಂದಮೂರ್ತಿ, ಎಂ.ಭೀಮರಾವ್, ಕೆ.ವೆಂಕಟೇಶ್ ಭಟ್ ಇತರರಿದ್ದರು.