

ಶೃಂಗೇರಿ: ಜಗದ್ಗುರು ಶ್ರೀ ಆದಿಶಂಕರಾಚಾರ್ಯ ಅವರಿಂದ ಸ್ಥಾಪಿತಗೊಂಡ ರಕ್ಷಣಾಧಿದೇವತೆ ಹರಾವರಿ ದುರ್ಗಾಂಬಾ ಮಲ್ಲಿಕಾರ್ಜುನ ದೇವಾಲಯದ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರಿಂದ ಗಣಪತಿಪೂಜೆ, ಶ್ರೀ ದುರ್ಗಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಿಸಿಲನ್ನೂ ಲೆಕ್ಕಿಸದೆ ನಾನಾ ಪ್ರಾಂತ್ಯಗಳಿಂದ ಸಾವಿರಾರು ಸದ್ಭಕ್ತರು ಶ್ರೀ ದುರ್ಗೆಗೆ ಹಣ್ಣು, ಹೂವು, ಕಾಯಿಗಳನ್ನು ಸಮರ್ಪಿಸಿದರು.
ರಥದಲ್ಲಿ ರೂಢಳಾದ ದುರ್ಗಾಂಬೆಯ ರಥೋತ್ಸವಕ್ಕೆ ವೇದ, ವಾದ್ಯ ಘೋಷ್ಠಿಗಳು, ಮಠದ ಆನೆಗಳು, ಅಶ್ವಗಳು, ಚೆಂಡೆವಾದನಗಳು, ರಂಗವಲ್ಲಿ ಚಿತ್ತಾರಗಳು, ಛತ್ರಿ, ಚಾಮರಗಳು, ತಳಿರು ತೋರಣಗಳು, ಬಣ್ಣಬಣ್ಣದ ಹೂಗಳಿಂದ ಸಾಲಂಕೃತಗೊಂಡ ದುರ್ಗಾದೇವಸ್ಥಾನ ಉತ್ಸವಕ್ಕೆ ವಿಶೇಷ ಮೆರುಗು ನೀಡಿದ್ದವು. ಬೆಳಗ್ಗೆ ದೇವಾಲಯದ ಕೊಂಚ ದೂರದ ತನಕ ರಥ ಎಳೆಯಲಾಯಿತು. ಸಂಜೆ ಪುನಃ ರಥೋತ್ಸವ ನೆರವೇರಿತು. ಉತ್ಸವದ ಸಲುವಾಗಿ ದೇವಾಲಯಕ್ಕೆ ಹಾಕಲಾದ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಗಮನ ಸೆಳೆಯಿತು. ಸಾಲು ಸಾಲಾಗಿ ಹಾಕಲಾದ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಜೋರಾಗಿತ್ತು. ರಥೋತ್ಸವ ಪ್ರಯುಕ್ತ ಗುರುವಾರ ರಾತ್ರಿ ದೇವಾಲಯ ಸನ್ನಿಧಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು.
ಹರ ಒಲಿದ ಕಾರಣ ಈ ಪ್ರದೇಶವನ್ನು ಹರಾವರಿ ಎಂದು ಕರೆಯಲಾಗುತ್ತದೆ. ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಲ್ಲಿಕಾರ್ಜುನ ಸ್ವಾಮಿ ವಿಗ್ರಹ ಇಲ್ಲಿದೆ. ಈ ಹಿಂದೆ ದೇಶದಲ್ಲಿ ಪ್ಲೇಗ್ ರೋಗ ಕಾಣಿಸಿಕೊಂಡು ಜನ ಸಾವನ್ನಪ್ಪಿದ್ದರು. ರೋಗ ಶೃಂಗೇರಿ ಜಹಗೀರು ಪ್ರದೇಶಗಳಲ್ಲಿ ಆವರಿಸಿಕೊಂಡಾಗ ಮಠದ ಶಿಷ್ಯರು ಮಠದ 33ನೇ ಅಧಿಪತಿ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಅವರ ಮೊರೆಹೋದರು. ಅವರೇ ಶ್ರೀ ದುರ್ಗೆಯ ಶ್ಲೋಕ ರಚಿಸಿ ಪೂಜೆ ಸಲ್ಲಿಸಿದ್ದಾಗ ಪ್ಲೇಗ್ ಮತ್ತೆ ಕಾಣಿಸಿಕೊಳ್ಳಲಿಲ್ಲ. ಈಗಲೂ ತಾಲೂಕಿನ ಜನರು ಸಮಸ್ಯೆಗಳು ಕಾಡಿದಾಗ ತಾಯಿಗೆ ಪೂಜೆ ಸಲ್ಲಿಸುವುದು ರೂಢಿಗತವಾಗಿ ಬಂದ ಪರಂಪರೆ.