ಹರಾಜು ಹೆಸರಿನಲ್ಲಿ ಅರಣ್ಯ ಲೂಟಿ!

05
Published on

ಶಿಡ್ಲಘಟ್ಟ : ಒಣಗಿದ ಮರಗಳನ್ನು ಕಡಿಯಲು ನಡೆಸಿದ ಹರಾಜು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡು ಹಸಿ ಮರಗಳಿಗೂ ಕೊಡಲಿ ಹಾಕಿರುವ ಹಾಗೂ 100 ಟನ್‌ಗಳಷ್ಟು ನೀಲಗಿರಿ ಮರಗಳನ್ನು ಕಡಿದು ಅಕ್ರಮವಾಗಿ ಮಾರಾಟ ನಡೆಸಿರುವುದುತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಟನ್ ಒಂದಕ್ಕೆ 1,000 ರೂ.ಗಳಂತೆ 5 ಟನ್ ಒಣಗಿದ ಕಡ್ಡಿ ಹಾಗೂ ಬುಡಗಳನ್ನು ಕೇವಲ 5 ಸಾವಿರ ರೂ.ಗೆ ಹರಾಜು ಮೂಲಕ ನೀಡಲಾಗಿದೆ. ಈ ಮೊತ್ತ ಮರಗಳಿಂದ ಉದುರುವ ಒಣ ಎಲೆ (ಸುರುಗು) ಖರೀದಿ ಮೊತ್ತಕ್ಕಿಂತಲೂ ಕಡಿಮೆ ಎನ್ನುವುದು ಅಚ್ಚರಿ ಮೂಡಿಸಿದೆ. ನೂರು ಟನ್ ನೀಲಗಿರಿ ಹಾಗೂ ಅದರ ಬುಡಗಳು ಈಗಾಗಲೇ ಸಾಗಣೆಯಾಗಿವೆ. ಹರಾಜು ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು, ಸರ್ಕಾರಕ್ಕೆ ಲಕ್ಷಾಂತರ ರೂ. ಆದಾಯ ಖೋತಾ ಮಾಡಲಾಗಿದೆ.

ಪ್ರಕ್ರಿಯೆ ಪ್ರಕಟಣೆಯನ್ನು ಉಲ್ಲಂಸಿ ಒಣ ಮರಗಳ ಜತೆಗೆ ಹಸಿ ಮರಗಳನ್ನೂ ಕತ್ತರಿಸಿರುವುದಲ್ಲದೆ ಸಾಲದ್ದಕ್ಕೆ ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಹಸಿ ಕಡ್ಡಿಗಳನ್ನು ಸಾಗಿಸಿರುವುದು ಸ್ಥಳೀಯರ ಕಣ್ಣು ಕೆಂಪಗಾಗಿಸಿದ್ದು, ಅಕ್ರಮದಲ್ಲಿ ಅಧಿಕಾರಿಗಳು ಪಾಲಿರುವ ಅನುಮಾನಗಳು ವ್ಯಕ್ತವಾಗುತ್ತಿವೆ.

ಮೀಸಲು ಅರಣ್ಯ ಪ್ರದೇಶಕ್ಕೆ ಸೇರುವ ಶಿಡ್ಲಘಟ್ಟ ತಾಲೂಕಿನ ತಿರುಮಲದಿನ್ನೆ ಅರಣ್ಯದ ಸರ್ವೇ ನಂ.31ರ ಸುಮಾರು 25 ಹೆಕ್ಟೇರ್‌ನಲ್ಲಿ 5 ಟನ್ ಒಣಗಿದ ನೀಲಗಿರಿ ಬುಡಗಳು ಹಾಗೂ ಕಡ್ಡಿಗಳನ್ನು ಹರಾಜು ಮೂಲಕ ಚಿಂತಾಮಣಿಯ ಗುತ್ತಿಗೆದಾರನಿಗೆ ನೀಡಲಾಗಿತ್ತು, ಆದರೆ ಆತ ಹಸಿ ಮರಗಳನ್ನು ಕಡಿದು ಸಾಗಣೆ ಮಾಡಿದ್ದಾನೆ.

ಅರಣ್ಯೀಕರಣಕ್ಕೆ ಒಂದಷ್ಟು ಜಾಗ ಸಿದ್ಧಗೊಳಿಸುತ್ತಿದ್ದು 5 ರಿಂದ 7 ಟನ್ ಒಣಗಿದ ಬುಡಗಳು ಹಾಗೂ ಕಡ್ಡಿಗಳು ಮಾತ್ರ ಹರಾಜಿನ ಮೂಲಕ ಮಾರಾಟ ಮಾಡಲಾಗಿದೆ ಎನ್ನುವುದು ಅಧಿಕಾರಿಗಳ ವಾದ. ಆದರೆ ಎಲ್ಲರೆದುರೇ ಹಸಿ ಮರಗಳನ್ನು ಕಡಿದು ಸಾಗಿಸುತ್ತಿದ್ದರೂ ಅಧಿಕಾರಿಗಳು ಮೌನವಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಕ್ರಮ ಸಕ್ರಮಗೊಳಿಸಲು ತಂತ್ರ! : ಹರಾಜು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಒಣಗಿದ ನೀಲಗಿರಿ ಬುಡಗಳು ಹಾಗೂ ಕಡ್ಡಿಗಳು ಎಂದು ನಮೂದಿಸಿದ್ದರೂ ಹಸಿ ಮರಗಳಿಗೆ ಕೊಡಲಿ ಏಟು ಬಿದ್ದಿದೆ. ಪ್ರಕರಣ ಸುತ್ತಮುತ್ತಲಿನ ಪ್ರದೇಶದ ಜನರ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಗುತ್ತಿಗೆದಾರನ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಅಕ್ರಮವನ್ನು ಸಕ್ರಮ ಮಾಡಲು ಹುನ್ನಾರ ನಡೆಸಿದ್ದಾರೆ.

ವಲಯ ಅರಣ್ಯ ಅಧಿಕಾರಿ ಸಮಜಾಯಿಷಿ! : ಹರಾಜು ಮಾಡಲು ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸದೇ ಪ್ರಕ್ರಿಯೆ ನಡೆಸಿದ್ದಾರೆ. ಪ್ರಕರಣದ ಕುರಿತು ವಲಯ ಅರಣ್ಯ ಅಧಿಕಾರಿ ದಿವ್ಯಾ ಅವರನ್ನು ಪ್ರಶ್ನಿಸಿದರೆ ‘‘ಈ ಪ್ರದೇಶದಲ್ಲಿ 16 ಎಕರೆಯಷ್ಟು ಒತ್ತುವರಿ ಆಗಿತ್ತು. ಅದರಲ್ಲಿ ರೈತರು ನೀಲಗಿರಿ ಬೆಳೆದಿದ್ದು ಒತ್ತುವರಿ ತೆರವುಗೊಳಿಸಿದಾಗ ಮರಗಳನ್ನು ಕಡಿದುಕೊಳ್ಳಲು ಅವಕಾಶ ನೀಡಿದ್ದೆವು. ಉಳಿದ ಬುಡಗಳು ಹಾಗೂ ಒಣ ಕಡ್ಡಿಗಳನ್ನು ಹರಾಜಿನಲ್ಲಿ ಚಿಂತಾಮಣಿಯ ಗುತ್ತಿಗೆದಾರನಿಗೆ ನೀಡಿದ್ದೆವು. ಆತ ಕೆಲವು ಹಸಿ ಮರಗಳನ್ನು ಕಡಿದಿರುವುದು ಗಮನಕ್ಕೆ ಬಂದಿದ್ದು, ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ಮಾರಾಟ ಮಾಡಿರುವ ಮರದ ಬೆಲೆಯನ್ನು ಆತನಿಂದ ವಸೂಲಿ ಮಾಡಲಾಗುತ್ತದೆ’ ಎಂದು ಸಮಜಾಯಿಷಿ ನೀಡಿದ್ದಾರಾದರೂ ಇಷ್ಟೆಲ್ಲ ನಡೆಯುತ್ತಿದ್ದರೂ ಗಮನಕ್ಕೆ ಬಂದಿರಲಿಲ್ಲವೆ? ಎಂಬ ಪ್ರಶ್ನೆ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net