

ಮಂಡ್ಯ : ವ್ಯಾಪಾರಕ್ಕೆಂದು ಬಂದ ಬ್ರಿಟೀಷರು ದೇಶದ ಅರಣ್ಯ ಸಂಪತ್ತನ್ನು ನಾಶ ಮಾಡಿ ಹೋದರು ಎಂದು ಪರಿಸರವಾದಿ ಮತ್ತು ಲೇಖಕ ಶಿವಾನಂದ ಕಳವೆ ತಿಳಿಸಿದರು.
ಪಾಂಡವಪುರ ತಾಲೂಕಿನ ಹರವು ಗ್ರಾಮದ ರಾಮದೇವರ ದೇವಸ್ಥಾನ ಆವರಣದ ದೇವರ ಕಾಡಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಬಳಗದ ಹರವು ದೇವೇಗೌಡ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ‘ಇರುವುದೊಂದೇ ಭೂಮಿ, ಉಳಿಸಿಕೊಳ್ಳೋಣ ಸ್ವಾಮಿ’ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ಮರ ಅಭಿವೃದ್ಧಿಯ ಮರು ವಿಮರ್ಶೆ ಎಂಬ ವಿಚಾರ ಕುರಿತು ಅವರು ಮಾತನಾಡಿದರು.
ಡಚ್ಚರು ಮತ್ತು ಫ್ರೆಂಚರು ಸಾಂಬಾರ ಪದಾರ್ಥಗಳಲ್ಲೊಂದಾದ ಕಾಳುಮೆಣಸಿನ ದರವನ್ನು ಏರಿಕೆ ಮಾಡಿದ ಪರಿಣಾಮವಾಗಿ ಸಾಂಬಾರ ಪದಾರ್ಥಗಳ ನೇರ ಖರೀದಿಗೆ ಭಾರತಕ್ಕೆ ಆಗಮಿಸಿದ ಬ್ರಿಟಿಷರು ಇಲ್ಲಿನ ಕಾಡುಗಳನ್ನು ನಾಶ ಮಾಡಿದರು. ಜತೆಗೆ ಸರ್ಕಾರ ರೂಪಿಸುವ ಬೃಹತ್ ಯೋಜನೆಗಳು ಅರಣ್ಯ ನಾಶಕ್ಕೆ ಕಾರಣವಾಗಿದೆ. ಮರ ಬೆಳೆಸುವ ವಿಚಾರದಲ್ಲಿ ರೈತರು ಮಂಚೂಣಿಯಲ್ಲಿದ್ದಾರೆ. ರಾಜ್ಯದ ಅನೇಕ ರೈತರು ತಮ್ಮ ಜಮೀನುಗಳಲ್ಲಿ ನೂರಾರು ಸಂಖ್ಯೆಯಲ್ಲಿ ಮರಗಳನ್ನು ಬೆಳೆದು ಅದನ್ನು ಪೋಷಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಸರ್ಕಾರಗಳು ಜನರನ್ನು ಹೊರಗಿಟ್ಟು ಅರಣ್ಯ ರಕ್ಷಿಸಲು ಯೋಚಿಸುತ್ತವೆ. ಆದರೆ, ವಾಸ್ತವವಾಗಿ ಇದು ಸಾಧ್ಯವಿಲ್ಲ. ಅರಣ್ಯಕ್ಕೆ ಬೇಲಿ ಹಾಕುವ ಅವಶ್ಯಕತೆಯಿಲ್ಲ. ಬದಲಾಗಿ ಅದರ ರಕ್ಷಣೆಯಾದರೆ ಸಾಕು. 1988ರ ಅರಣ್ಯ ಕಾಯ್ದೆ ಪ್ರಕಾರ ಅರಣ್ಯದಿಂದ ಹೊರಗೆ ಅರಣ್ಯ ಬೆಳೆಸುವುದಕ್ಕೆ ಮಹತ್ವ ಸಿಕ್ಕಿದೆ. ಅರಣ್ಯ ರಕ್ಷಣೆಗಾಗಿ ರೂಪಿಸಬೇಕಾದ ಯೋಜನೆಗಳ ಬಗ್ಗೆ ಅನೇಕರು ವರದಿ ನೀಡಿದ್ದಾರೆ. ಅದರ ಅನುಷ್ಠಾನಗೊಳಿಸಲು ಕಾಳಜಿಯ ಕೊರತೆ ಇದೆ. ಕಾಡಿಗೆ ಬೀಳುವ ಬೆಂಕಿ ಅರಣ್ಯ ಸುಡುತ್ತಿಲ್ಲ. ಬದಲಾಗಿ ಮನುಷ್ಯರನ್ನೇ ಸುಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಗಿಡಗಳನ್ನು ನೆಡಲಾಯಿತು. ಬಳಿಕ ಪರಿಸರ ಗೀತೆಗಳು, ಪ್ರಶ್ನೋತ್ತರ, ಸಂವಾದ ನಡೆಯಿತು. ಮೈಸೂರು ಹರೀಶ್ ಅವರು ತಾರಸಿ ತೋಟಗಾರಿಕೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಹರವು ದೇವೇಗೌಡ, ಪ್ರಕಾಶ್, ಪರಶುರಾಮೇಗೌಡ, ಧನ್ಯಕುಮಾರ್, ಡಿ.ಕೆ.ಅಂಕಯ್ಯ, ಕೋ.ಪು.ಗುಣಶೇಖರ್ ಇತರರು ಇದ್ದರು.